ಬೆಂಗಳೂರು: ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿಹಿಡಿದಿದೆ.
ಲಿಂಗಾಯಿತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂಬ ಕಾರಣಕ್ಕೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಎರಡು ತಿಂಗಳ ಕಾಲ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆನಂದ್ ಆದೇಶ ಹೊರಡಿಸಿದ್ದರು. ಅ.16ರಿಂದ ಡಿಸೆಂಬರ್ 14ರವರೆಗೆ ಸ್ವಾಮೀಜಿಯವರಿಗೆ ವಿಜಯಪುರ ಪ್ರವೇಶಕ್ಕೆ ನಿರ್ಬಂಧ ಜಾರಿಯಾಗಿದೆ.
ಇದನ್ನು ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸ್ವಾಮೀಜಿ ಅರ್ಜಿ ವಜಾಗೊಳಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಸ್ವಾಮೀಜಿ ಹಿತದೃಷ್ಟಿಯಿಂದಲೇ ವಿಜಯಪುರ ಭೇಟಿಗೆ ಅವರಿಗೆ ಪ್ರತಿಬಂಧವಿಧಿಸಲಾಗಿದೆ ಎಂದು ವಾದ ಮಂಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿಹಿಡಿದಿದೆ.