ತುಮಕೂರು: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಬೆಂಬಲಿಗರು ಪ್ರತಿಭಟನೆ ತೀವ್ರಗೊಳಿಸಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ ಬಂದ್ ಮಾಡಿದ್ದಾರೆ.
ಮಧುಗಿರಿ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಜಮಾವಣೆಗೊಂಡಿರುವ ರಾಜಣ್ಣ ಬೆಂಬಲಿಗರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಟೈರ್ ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.
ರಾಜಣ್ಣ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಎಸಿ ಕಚೇರಿವರೆಗೆ ಅಭಿಮಾನಿಗಳು ಸಾಗಿದರು. ಎಸಿ ಕಚೇರಿಬಳಿ ಜಮಾವಣೆಗೊಂಡ ಬೆಂಬಲಿಗರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಬಳಿಕ ತುಮಕೂರು ಗೇಟ್ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಂಜಿ.ಕ್ರೀಡಾಂಗಣದ ಬಳಿ ಬೆಂಬಲಿಗರು ಹೈಡ್ರಾಮಾ ನಡೆಸಿದರು. ಅಭಿಮಾನಿಯೊಬ್ಬ ವಿಷ ಸೇವಿಸಲು ಯತ್ನಿಸಿದ ಪ್ರಸಂಗವೂ ನಡೆಯಿತು. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.