ಬಳ್ಳಾರಿ: ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು ನಾಯಕರು ಒಟ್ಟಾಗಿ ಕುಳಿತು ಸಿನಿಮಾ ನೋಡಿದ್ದಾರೆ.
ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅಭಿನಯದ ‘ಜೂನಿಯರ್’ ಸಿನಿಮಾ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಹಳೆ ದ್ವೇಷ ಮರೆತು ಒಂದಾಗಿರುವ ಜನಾರ್ಧನ ರೆಡ್ಡಿ, ಶ್ರೀರಾಮುಲು ಮತ್ತೆ ದೋಸ್ತಿ ಮುಂದುವರೆಸಿದ್ದಾರೆ. ಬಿಜೆಪಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಳ್ಳಾರಿಯಲ್ಲಿ ನಿನ್ನೆ ತಡರಾತ್ರಿ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಥಿಯೇಟರ್ ಗೆ ತೆರಳಿ ಒಟ್ಟಾಗಿ ಜೂನಿಯರ್ ಸಿನಿಮಾ ವೀಕ್ಷಿಸಿದ್ದಾರೆ. ಈ ಮೂಲಕ ಮತ್ತೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಮತ್ತೆ ಬಿಜೆಪಿ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲು ಮತ್ತೆ ಜನಾರ್ಧನ ರೆಡ್ಡಿ ಗೆಳೆತನದ ಮೂಲಕ ಇಬ್ಬರೂ ನಾಯಕರು ರಾಜಕೀಯವಾಗಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.