ಬೆಂಗಳೂರು: ಧರ್ಮಸ್ಥಳದ ವಿರುದ್ಧ ಪಿತೂರಿ, ಷಡ್ಯಂತ್ರದ ಹಿಂದೆ ಮಾಜಿ ಡಿಸಿ, ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಆರೋಪಿಸಿದ್ದ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಸಸಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಶಾಸಕ ಜನಾರ್ಧನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಸತ್ಯಾಂಶವಿಲ್ಲದೇ ನಾನು ಯಾವತ್ತೂ ಮಾತನಾಡಲ್ಲ. ನನ್ನ ಮೇಲೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಕೇಸ್ ಎದುರಿಸಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.
ಸಸಿಕಾಂತ್ ಸೆಂಥಿಲ್ ನನ್ನ ವಿರುದ್ಧ ಕೇಸ್ ಹಾಕಿದ್ದನ್ನು ಸ್ವಾಗತಿಸುತ್ತೇನೆ. ಕೇಸ್ ಎದುರುಸಲು ನಾನು ಸಿದ್ಧನಿದ್ದೇನೆ. ಸಮಾಜ ಒಡೆಯಲು ಸೆಂಥಿಲ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಕೇಸ್ ಹಾಕಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಧರ್ಮಸ್ಥಳ ವಿಚಾರವಾಗಿ ಅಪಪ್ರಚಾರ ನಡೆಸಿ ಷಡ್ಯಂತ್ರ ಮಾಡಲಾಗಿದೆ. ಕರ್ನಾಟಕದ ಗಡಿ ದಾಟಿ ಷಡ್ಯಂತ್ರ ರೂಪಿಸಲಾಗಿದೆ. ಸತ್ಯಾಂಶವಿಲ್ಲದೇ ಜನಾರ್ಧನ ರೆಡ್ಡಿ ಯಾವತ್ತೂ ಮಾತನಾಡುವುದಿಲ್ಲ ಎಂದರು.