ಶ್ರೀನಗರ: ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿರುವ ಬೆನ್ನಲ್ಲೇ ಜಮ್ಮು-ಕಾಶ್ಮೀರದಾದ್ಯಂತ ಕಟ್ಟೆಚ್ಚರ ವೈಹಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಉದ್ದಕ್ಕೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಶ್ರೀನಗರ ವಿಮಾನ ನಿಲ್ದಾಣವನ್ನು ನಿಯತ್ರಣಕ್ಕೆ ತೆಗೆದುಕೊಂಡಿದೆ. ಅಲ್ಲದೇ ನಾಗರಿಕ ವಿಮಾನಗಳ ಕಾರ್ಯಾಚರಣೆಯನ್ನು ಅನಿರ್ಧಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಶ್ರೀನಗರ ವಿಮಾನ ನಿಲ್ದಾಣ ಭಾರತೀಯ ವಾಯುಪಡೆ ನಿಯಂತ್ರಣದಲ್ಲಿದ್ದು, ವಿಮಾನ ಸಂಚಾರ, ಲ್ಯಾಂಡಿಂಗ್ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ವಾಯುಪ್ರದೇಶ ಹೊರತುಪಡಿಸಿ ಅಗ್ನಿಶಾಮಕ, ಎಲ್ಲ ವಾಯು ಸುರಕ್ಷತಾ ಕಾರ್ಯವಿಧಾನಗಳನ್ನು ಸಹ ನಿಯಂತ್ರಿಸಲಾಗುತ್ತಿದೆ.
ಇನ್ನೊಂದೆದೆ ಹಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಜಮ್ಮು-ಕಾಶ್ಮೀರ, ಅಮೃತಸರ, ಚಂಡೀಗಢ, ಧರ್ಮಶಾಲಾ, ಲೇಹ್ ನ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟವನ್ನು ತಾತ್ಕಾಲಿಕ ರದ್ದುಗೊಳಿಸಿವೆ.