ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 28 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದು ಖಚಿತಪಟ್ಟಿದೆ.
ಪಾಕಿಸ್ತಾನ ಮೂಲದ ಐವರು ಉಗ್ರರು ಪಹಲ್ಗಾಮ್ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಐವರು ಉಗ್ರರ ಹೆಸರನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ.
ಪಾಕಿಸ್ತಾನ ಮೂಲದ ಹಾಶಿಮ್ ಮೂಸಾ ಎಂಬ ಉಗ್ರನ ನೇತೃತ್ವದಲ್ಲಿ ದಾಳಿ ನಡೆದಿದೆ. ಸುಲೈಮಾನ್ ಎಂದು ಕರೆಯಲ್ಪಡುವ ಹಾಶಿಮ್ ಮೂಸಾ ಸೂಚನೆ ಮೇರೆಗೆ ಐವರು ಉಗ್ರರು ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಐವರು ಉಗ್ರರ ರೇಖಾಚಿತ್ರವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಇವರಲ್ಲಿ ಮೂವರು ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕರಾಗಿದ್ದಾರೆ. ಇಬ್ಬರು ಕಾಶ್ಮೀರಿ ಉಗ್ರರಾಗಿದ್ದು, ಇವರಿಗೆ ಲಷ್ಕರ್-ಎ-ತೊಯ್ಬಾದಿಂದ ತರಬೇತಿ ನೀಡಲಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಅಲ್ಸಾನ್, ಅನಂತ್ ನಾಗ್ ಜಿಲ್ಲೆಯ ಆದಿಲ್ ಹುಸೇನ್ ತೋಕರ್ ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.