ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ನ್ಯಾಯಾಲಯದ ವಿಚಾರಣೆಯೊಂದರ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನ್ಯಾಯಾಧೀಶರೊಬ್ಬರು (Judge), ಸ್ಥಿರವಾದ ಆದಾಯವಿಲ್ಲದಿದ್ದರೂ ಮದುವೆಯಾದ ವ್ಯಕ್ತಿಯನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಆದರೆ, ನ್ಯಾಯಾಧೀಶರ ಈ ‘ಸಹಜ’ ಎನ್ನಲಾದ ಮಾತುಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಚರ್ಚೆಗೆ (Debate) ಕಾರಣವಾಗಿವೆ.
ಯಾವ ದಿನಾಂಕದ ವಿಡಿಯೋ ಇದು ಎಂದು ಖಚಿತವಾಗಿ ತಿಳಿದಿಲ್ಲವಾದರೂ, ಜೂಮ್ ಕಾಲ್ (Zoom call) ಮೂಲಕ ನಡೆಯುತ್ತಿರುವ ವಿಚ್ಛೇದನ ಪ್ರಕರಣದ (Divorce case) ವಿಚಾರಣೆಯ ದೃಶ್ಯ ಇದಾಗಿದೆ. ನ್ಯಾಯಾಧೀಶರು ತಮ್ಮ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬರೊಂದಿಗೆ ನಡೆಸುತ್ತಿರುವ ಸಂವಾದ ಹೀಗಿದೆ: ನಿಮಗೆ ಕೆಲಸವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ, ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಈ ವೇಳೆ ನ್ಯಾಯಾಧೀಶರು, ಜಾಮೀನು ಪಡೆಯುವಾಗ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಹೇಳಿ, ಆದಾಯದ ಬಗ್ಗೆ ವಿಚಾರಿಸಿದ್ದಾರೆ. ಆಗ ವ್ಯಕ್ತಿ, ಕರೆ ಬಂದಾಗ ವೈದ್ಯಕೀಯ ಸೇವೆ ನೀಡುತ್ತೇನೆ ಎಂದಿದ್ದಾಗಿ ತಿಳಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ನೀವು ವೈದ್ಯರು. ನಿಮಗೆ ಆ ಹಕ್ಕಿಲ್ಲ. ವಕೀಲರಿಗೆ ಮಾತ್ರ ಆದಾಯವಿಲ್ಲದೆ ಮದುವೆಯಾಗುವ ಹಕ್ಕಿದೆ. ವೈದ್ಯರಿಗೆ ಅಂತಹ ಯಾವುದೇ ಹಕ್ಕಿಲ್ಲ. ಆದಾಯವಿಲ್ಲದೆ ನೀವು ಹೇಗೆ ಮದುವೆಯಾದಿರಿ?” ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರ ಈ ರೀತಿಯ ‘ಸಹಜ’ ಧಾಟಿಯ ಅಭಿಪ್ರಾಯವು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಮಂದಿ ನ್ಯಾಯಾಧೀಶರ ಈ ಹೇಳಿಕೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಎಕ್ಸ್‌ನಂತಹ (X) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಕೆದಾರರು ತಮ್ಮ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದಾಯವಿಲ್ಲದ ವ್ಯಕ್ತಿಯು ಮದುವೆಯಾಗಬಾರದು ಎಂದು ಹೇಳಲು ದೇಶದ ಯಾವ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಒಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, “ನ್ಯಾಯಾಲಯವು ಪುರುಷನ ಆರ್ಥಿಕ ಸ್ಥಿತಿಯನ್ನು ಪ್ರಶ್ನಿಸುವುದು ವಿಚಿತ್ರವಾಗಿದೆ, ಆದರೆ ಆದಾಯವಿಲ್ಲದೆ ಮದುವೆಯಾದ ಮಹಿಳೆಯನ್ನು ಏಕೆ ವಿಚಾರಿಸುವುದಿಲ್ಲ? ಎರಡೂ ಕಡೆಯವರ ಆಯ್ಕೆ ಮತ್ತು ಜವಾಬ್ದಾರಿಗಳನ್ನು ಸಮಾನವಾಗಿ ಪರಿಗಣಿಸಬೇಕಲ್ಲವೇ?” ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, “ಮದುವೆಯಾಗಲು ಪುರುಷನಿಗೆ ಸ್ಥಿರವಾದ ಆದಾಯವಿರಬೇಕು ಎಂದು ಯಾವುದೇ ದೇಶದ ಕಾನೂನಿನಲ್ಲಿ ಇದೆಯೇ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಭಾರತದಲ್ಲಿ ಹಿಂದೂ ವಿವಾಹಗಳು ಮುರಿದುಬೀಳಲು ನ್ಯಾಯಾಂಗವೇ ಮುಖ್ಯ ಕಾರಣ” ಎಂದು ನೇರವಾಗಿ ಆರೋಪಿಸಿದ್ದಾರೆ. “ಆದಾಯವಿದ್ದರೆ ಮಾತ್ರ ಮದುವೆಯಾಗಬಹುದು ಎಂದು ಯಾವ ಕಾನೂನಿನಲ್ಲಿ ಬರೆಯಲಾಗಿದೆ ಎಂದು ಈ ನ್ಯಾಯಾಧೀಶರು ತಿಳಿಸಬೇಕು? ಮದುವೆಯಾದಾಗ ಆದಾಯವಿದ್ದು, ನಂತರ ಕಳೆದುಕೊಂಡರೆ ಅದು ಅಪರಾಧವೇ? ಇದು ಒಬ್ಬ ಬೇಜವಾಬ್ದಾರಿ ನ್ಯಾಯಾಧೀಶರ ಬೇಜವಾಬ್ದಾರಿ ಹೇಳಿಕೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಒಟ್ಟಾರೆಯಾಗಿ, ನ್ಯಾಯಾಧೀಶರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
Why did you get married without any income? pic.twitter.com/iwqf0K5Sea
— ShoneeKapoor (@ShoneeKapoor) April 1, 2025