ಅಮೆರಿಕ & ಇರಾನ್ ನಡುವೆ ಶುರುವಾದ ಈ ಯುದ್ಧದಲ್ಲಿ, ಇಸ್ರೇಲ್ ಕೂಡ ಇರಾನ್ ವಿರುದ್ಧ ದಾಳಿ ಮಾಡಿ ದೊಡ್ಡ ಪ್ರಮಾಣದ ನಷ್ಟ ಉಂಟು ಮಾಡುತ್ತಿದೆ. ಶತ್ರು ದೇಶ ಇರಾನ್ ವಿರುದ್ಧ ಇಸ್ರೇಲ್ ಸೇನೆ ಮುಲಾಜು ನೋಡದೆ ಅಟ್ಯಾಕ್ ಮಾಡುತ್ತಿದೆ. ಹಾಗೇ ಅಮೆರಿಕ ಕೂಡ ಇರಾನ್ ದೇಶದ ಪರಮಾಣು ಸ್ಥಾವರಗಳು ಹಾಗೂ ಕ್ಷಿಪಣಿ ಸಂಗ್ರಹ ಮಾಡಿರುವ ಜಾಗಗಳ ಮೇಲೆ ದಾಳಿ ಮಾಡಿ ಎಚ್ಚರಿಕೆ ಸಂದೇಶ ನೀಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಮರುದಾಳಿ ನಡೆಸುತ್ತಾ ಕುವೈತ್, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಯುಎಇ ಭಾಗದಲ್ಲಿರುವ ಅಮೆರಿಕ ಸೇನೆಯ ನೆಲೆಗಳನ್ನ ನಾಶ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 48 ಗಂಟೆಗಳ ಡೆಡ್‌ಲೈನ್, ಇರಾನ್ ಮೇಲೆ ಪರಮಾಣು ಅಸ್ತ್ರ ಬಳಕೆಗೆ ಅಮೆರಿಕ ಸಿದ್ಧತೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದ್ದು, 48 ಗಂಟೆ ಒಳಗಾಗಿ ಗಂಭೀರ ಪರಿಣಾಮ ಎದುರಿಸುತ್ತೀರಿ ಹೀಗಾಗಿ ಸುಮ್ಮನೆ ಯುದ್ಧ ನಿಲ್ಲಿಸಿ ಶರಣಾಗಿ ಎಂದು ಆಗ್ರಹಿಸಿದ್ದಾರೆ. ಮಾರ್ಚ್ 26 ಗುರುವಾರ ಇದೇ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ 10 ದಿನಗಳ ಗಡುವು ನೀಡಿದ್ದರು, ಅಲ್ಲದೆ ಹಾರ್ಮೂಜ್ ಜಲಸಂಧಿ ತೆರೆಯಲು ಸೂಚಿಸಿದ್ದರು. ಈಗ ಡೆಡ್‌ಲೈನ್ ಮುಗಿದ ಬೆನ್ನಲ್ಲೇ 48 ಗಂಟೆ ಒಳಗೆ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಿ ಎಂದು ಕೊನೇ ಬಾರಿಗೆ ಎಚ್ಚರಿಕೆ ಸಂದೇಶವನ್ನ ರವಾನಿಸಿದ್ದಾರೆ ಅಮೆರಿಕ ಅಧ್ಯಕ್ಷರು.

ನಾನು ಇರಾನ್‌ಗೆ 10 ದಿನ ಕಾಲಾವಕಾಶ ನೀಡಿದ್ದು ನೆನಪಿರಲಿ, ಒಪ್ಪಂದವನ್ನ ಮಾಡಿಕೊಳ್ಳಿ ಅಥವ ಹಾರ್ಮೂಜ್ ಜಲಸಂಧಿ ತೆರೆಯಿರಿ. ಈಗ ಸಮಯ ಮುಗಿಯುತ್ತಿದೆ, 48 ಗಂಟೆಗಳ ಒಳಗೆ ಭಾರಿ ಪರಿಣಾಮ ಎದುರಾಗಲಿದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಟ್ರಂಪ್. ಈ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆ, ಟ್ರೂತ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಟ್ರಂಪ್ ಅವರ ಈ ಪೋಸ್ಟ್ ಮತ್ತೊಮ್ಮೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು, ಇರಾನ್ ವಿರುದ್ಧ ದೊಡ್ಡ ಮಟ್ಟದ ದಾಳಿ ಬಗ್ಗೆ ಮುನ್ಸೂಚನೆ ನೀಡಿದಂತೆ ಭಾಸವಾಗುತ್ತಿದೆ.
ಅಮೆರಿಕ ವಿರುದ್ಧ ಇರಾನ್ ವಾಗ್ದಾಳಿ
ಡೊನಾಲ್ಡ್ ಟ್ರಂಪ್ ಅವರು ಒಂದು ಕಡೆ ಈ ರೀತಿ ಸಂಧಾನ ಮಾತುಕತೆ ಹಾಗೂ ಇರಾನ್ ದೇಶಕ್ಕೆ ಗಡುವು ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇರಾನ್ ಮಾತ್ರ ಅಮೆರಿಕ ವಿರುದ್ಧ ದಾಳಿ ಮಾಡುತ್ತಲೇ ಇದ್ದು, ಯುದ್ಧ ವಿಮಾನ ಹಾಗೂ ಸೇನಾ ನೆಲೆಗಳನ್ನು ನಾಶ ಮಾಡುತ್ತಿದೆ. ಇದರ ಜೊತೆಗೆ ಅಮೆರಿಕ ವಿರುದ್ಧ ಕೂಡ ಇರಾನ್ ವಾಗ್ದಾಳಿ ನಡೆಸುತ್ತಿದೆ. ಇದು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಅಮೆರಿಕ ಅಂತಿಮವಾಗಿ ಪರಮಾಣು ಅಸ್ತ್ರಗಳನ್ನ ಇರಾನ್ ವಿರುದ್ಧ ಬಳಕೆ ಮಾಡುತ್ತಾ? ಎಂಬ ಆತಂಕದ ಚರ್ಚೆ ಕೂಡ ಶುರುವಾಗಿದೆ ಈಗ.
ಇರಾನ್ ರಾಜಧಾನಿ ಮೇಲೆ ದಾಳಿ
ಇಸ್ರೇಲ್ ಸೇನೆ ತನ್ನ ಪ್ರಬಲ ಕ್ಷಿಪಣಿಗಳು ಹಾಗೂ ಡ್ರೋನ್ ವ್ಯವಸ್ಥೆಯ ಮೂಲಕ ಇರಾನ್ ದೇಶದ ರಾಜಧಾನಿ ತೆಹ್ರಾನ್ ಮೇಲೆ ದಾಳಿ ಮುಂದುವರಿಸಿದೆ. ಇದರ ಪರಿಣಾಮ ಇರಾನ್ ರಾಜಧಾನಿ ಜನರು ಭಯದಲ್ಲೇ ಜೀವನ ನಡೆಸುತ್ತಿದ್ದು, ಈಗಾಗಲೇ ಇರಾನ್ ರಾಜಧಾನಿಯಲ್ಲಿ ಸಾವಿರಾರು ಕಟ್ಟಡಗಳು ಪೀಸ್ ಪೀಸ್ ಆಗಿವೆ. ಇರಾನ್ ಸೇನೆ ಕೂಡ ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದ ದಾಳಿ ಮಾಡುತ್ತಿದ್ದು, ಟೆಲ್ ಅವಿವ್ ಸಾಕಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.
ಒಟ್ನಲ್ಲಿ ಸಾಧ್ಯವಾದಷ್ಟು ಬೇಗ ಇರಾನ್ ಯುದ್ಧ ನಿಲ್ಲಬೇಕು, ಆ ಮೂಲಕ ಶಾಂತಿ ಸ್ಥಾಪನೆ ಮಾಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಯುದ್ಧ ಇನ್ನಷ್ಟು ಘೋರ ಹಂತಕ್ಕೆ ತಲುಪುವ ಸಾಧ್ಯತೆಗಳು ಇದ್ದು, ಆ ಮೂಲಕ ಮತ್ತೊಂದು ಮಹಾಯುದ್ಧಕ್ಕೆ ಕೂಡ ಇದೇ ತಿಕ್ಕಾಟ ಹಾದಿ ಮಾಡಿಕೊಡುವ ಭಯ ಕೂಡ ಆವರಿಸಿದೆ. ಹೆಜ್ಜೆ ಹೆಜ್ಜೆಗೂ ಮಧ್ಯಪ್ರಾಚ್ಯ ದೇಶಗಳು ಆತಂಕದಲ್ಲೇ ಇದೀಗ ದಿನದೂಡುವ ವಾತಾವರಣ ನಿರ್ಮಾಣ ಆಗಿದೆ.

