ಬೆಂಗಳೂರು: ಶೇಕಡ 17ರಷ್ಟು ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ ಆ. 16ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಈ ಕುರಿತಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ ಎಸ್ಸಿಗೆ ಮೀಸಲಾಗಿರುವ ಶೇಕಡ 17ರಷ್ಟು ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ವರದಿ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗಿದ್ದು, ಆಗಸ್ಟ್ 16ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪ್ರವರ್ಗ ಎ ಶೇಕಡ 1ರಷ್ಟು ಮೀಸಲಾತಿ ನೀಡಿಲಾಗಿದ್ದು, ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 59 ಸಣ್ಣ ಪುಟ್ಟ ಸಮುದಾಯಗಳಿವೆ.
ಪ್ರವರ್ಗ ಬಿ ನಲ್ಲಿ ಹೆಚ್ಚು ಹಿಂದುಳಿದ ಮಾದಿಗ ಮತ್ತು ಅದೇ ರೀತಿ ಸಾಮಾಜಿಕ ಆರ್ಥಿಕ ರಾಜಕೀಯ ಸ್ಥಿತಿ ಇರುವ 18 ಸಮುದಾಯಗಳಿದ್ದು, ಶೇಕಡ 6ರಷ್ಟು ಮೀಸಲಾತಿ ನೀಡಲಾಗಿದೆ.
ಪ್ರವರ್ಗ ಸಿ ಯಲ್ಲಿ ಹಿಂದುಳಿದ ಹೊಲಯ ಮತ್ತು ಅದೇ ರೀತಿಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತಿ ಇರುವ 17 ಜಾತಿಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗಿದೆ.
ಪ್ರವರ್ಗ ಡಿ ನಲ್ಲಿ ಕಡಿಮೆ ಹಿಂದುಳಿದ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿದ್ದು, ಶೇ. 4 ಮೀಸಲಾತಿ ನೀಡಲಾಗಿದೆ
ಪ್ರವರ್ಗ ಇ ನಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರಗಳಿಗೆ ಶೇ. 1ರಷ್ಟು ಮೀಸಲಾತಿ ನೀಡಲಾಗಿದೆ. ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಜಾತಿ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ.