ಬೆಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರ ಅಲಿಯಾಸ್ ನಿತೇಶ್ ಕೃಷ್ಣಪ್ರಸಾದ್ ಪೊಲೆಪಲ್ಲಿ ಅವರಿಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ 15 ದಿನ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಬಾರದೆಂದು ನ್ಯಾಯಾಲಯ ಹೊರಡಿಸಿದ್ದ ತಡೆಯಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಿಂದನಾತ್ಮಕ ಮತ್ತು ಆಧಾರರಹಿತ ಹೇಳಿಕೆ ನೀಡುತ್ತಿದ್ದ ಅಹೋರಾತ್ರ ವಿರುದ್ಧ ಶೀನಪ್ಪ ಎಂಬುವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ್ದು, ಅಂತಿಮ ತೀರ್ಪು ಬರುವವರೆಗೆ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡದಂತೆ ಅಹೋರಾತ್ರಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿತ್ತು.
ಕೋರ್ಟ್ ಆದೇಶವನ್ನು ಲೆಕ್ಕಿಸದೆ ತಮ್ಮ ಹೇಳಿಕೆಗಳನ್ನು ನೀಡುವುದನ್ನು ಅಹೋರಾತ್ರ ಮುಂದುವರೆಸಿದ್ದು, ಇದನ್ನು ಕೋರ್ಟ್ ಗಮನಕ್ಕೆ ತಂದಿದ್ದು, ನ್ಯಾಯಾಲಯದ ಆದೇಶ ಉಲ್ಲಂಘನೆಗಾಗಿ 15 ದಿನ ಸಿವಿಲ್ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಲು ಆದೇಶಿಸಲಾಗಿದೆ. ಸಿವಿಲ್ ಜೈಲಿನಲ್ಲಿ ಬಂಧನದಲ್ಲಿಡುವ ಅವಧಿಗೆ ಬೇಕಾದ ಅಗತ್ಯ ಜೀವನ ನಿರ್ವಹಣಾ ಭತ್ಯೆಯನ್ನು ಅರ್ಜಿದಾರರೇ ಭರಿಸಬೇಕೆಂದು ಕೋರ್ಟ್ ನಿರ್ದೇಶಿಸಿದೆ.