ಭಾರತದ ಕ್ರಿಕೆಟ್ ತಂಡ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿ ತಮಗೆ ಬಿಡುವು ಸಿಕ್ಕಾಗೆಲ್ಲಾ ತಮ್ಮ ಫಾರಂ ಹೌಸ್‌ನಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಲು ಇಷ್ಟ ಪಡುತ್ತಾರೆ ಎಂದು ಬಹುತೇಕರಿಗೆ ತಿಳಿದ ವಿಚಾರವಾಗಿದೆ.
ರಾಂಚಿಯ ಹೊರ ವರ್ತುಲ ರಸ್ತೆಯ ಬಳಿ ಏಳು ಎಕರೆ ಪ್ರದೇಶದಲ್ಲಿ ಫಾರಂ ಹೌಸ್ ನಿರ್ಮಿಸಿಕೊಂಡಿರುವ ಧೋನಿ ಈ ಜಮೀನಿನಲ್ಲಿ ಅನೇಕ ರೀತಿಯ ಬೆಳೆಗಳನ್ನು ಬೆಳೆಸಿದ್ದಾರೆ. ಶಿವ ಭಕ್ತರಾದ ಧೋನಿ ತಮ್ಮ ಫಾರಂ ಹೌಸ್‌ಗೆ ಕೈಲಾಶ್‌ಪತಿ ಎಂದು ಹೆಸರಿಟ್ಟಿದ್ದಾರೆ.
ಈ ಫಾರಂ ಹೌಸ್ ಅನ್ನು ಖುದ್ದು ಧೋನಿ ತಮ್ಮ ರುಚಿಗೆ ತಕ್ಕಂತೆ ಡಿಸೈನರ್‌ಗಳ ಸಹಾಯದಿಂದ ವಿನ್ಯಾಸಗೊಳಿಸಿದ್ದಾರೆ., ಆಧುನಿಕ ಜಿಮ್ಯಾಶಿಯಂ, ಕ್ರಿಕೆಟ್ ಅಭ್ಯಾಸ ಮಾಡುವ ಸೌಲಭ್ಯ, ಈಜುಕೊಳ, ತಮ್ಮ ವಾಹನಗಳಿಗೆ ಗ್ಯಾರೇಜ್ ಇರುವ ಈ ಪ್ರದೇಶ ಎಲ್ಲೆಲ್ಲೂ ಹಸಿರುಮಯವಾಗಿದೆ.
ಮೂರು ವರ್ಷಗಳ ಅವಧಿಯಲ್ಲಿ ಈ ಮನೆ ನಿರ್ಮಾಣವಾಗಿದೆ. ಪ್ರಕೃತಿ ಪ್ರಿಯರಾದ ಧೋನಿ ತಮ್ಮ ಫಾರಂ ಹೌಸ್‌ನ ಬಹುತೇಕ ಪ್ರದೇಶವನ್ನು ಗಿಡ, ಸಸಿಗಳನ್ನು ನೆಡಲು ವಿನಿಯೋಗಿಸಿದ್ದಾರೆ. ಮರ ಹಾಗೂ ಮಾರ್ಬಲ್ ನೆಲಹಾಸುಗಳನ್ನು ಹೊಂದಿರುವ ಈ ಮನೆಯ ಒಳಗೂ ಸಹ ಸಸಿಗಳನ್ನು ನೆಡಲಾಗಿದೆ.