ಬೆಂಗಳೂರು: ಕೋವಿಡ್ – 19 ಅವಧಿಯಲ್ಲಿನ ಅಕ್ರಮದ ಕುರಿತಾಗಿ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ಆಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನಿಖಾ ವರದಿ ಸಲ್ಲಿಸಲಾಗಿದೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಇಂದು ಸಂಜೆ ಕೋವಿಡ್ ಅಕ್ರಮದ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿದೆ.
ಸುಮಾರು 7 ಸಂಪುಟವುಳ್ಳ 1808 ಪುಟಗಳಿರುವ ಕೋವಿಡ್ -19 ವರದಿಯನ್ನು ಸಲ್ಲಿಸಲಾಗಿದೆ. 2023ರ ಆಗಸ್ಟ್ 25 ರಂದು ಆಯೋಗವನ್ನು ರಚನೆ ಮಾಡಲಾಗಿತ್ತು. 2024ರ ಆಗಸ್ಟ್ 31 ರಂದು ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿತ್ತು. 11 ಸಂಪುಟಗಳಲ್ಲಿ ಮೊದಲ ತನಿಖೆಯ ರಿಪೋರ್ಟ್ ನೀಡಲಾಗಿತ್ತು. ಇದೀಗ ಎರಡನೇ ಮಧ್ಯಂತರ ವರದಿಯನ್ನು ಆಯೋಗ ಸಲ್ಲಿಸಿದೆ.
ಕೋವಿಡ್ ವೇಳೆ ವ್ಯಾಪಕ ಅಕ್ರಮ ನಡೆದಿದ್ದು, ಖರೀದಿಯಲ್ಲೂ ಸಾಕಷ್ಟು ಅವ್ಯವಹಾರಗಳಾಗಿವೆ. ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.