ಬೆಂಗಳೂರು: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವುಂಟಾಗಿ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂಡಿಗೋ ವಿಮಾನ ಸಮಸ್ಯೆ ಬೆನ್ನಲ್ಲೇ ಇತರ ವಿಮಾನಗಳ ಟಿಕೆಟ್ ದರ ಭಾರಿ ಏರಿಕೆಯಾಗಿತ್ತು. ಇದೀಗ ವಿಮಾನಗಳಂತೆ ಬಸ್ ಟಿಕೆಟ್ ದರಗಳೂ ದುಪ್ಪಟ್ಟಾಗಿದ್ದು, ಪ್ರಯಾಣಿಕರು ದಂಗಾಗಿದ್ದಾರೆ.
ಬೆಂಗಳೂರಿನಿಂದ ಮುಂಬೈ, ಪುಣೆ ನಗರಗಳಿಗೆ ಸಂಚರಿಸುವ ಖಾಸಗಿ ಬಸ್ ಗಳ ಪ್ರಯಾಣ ದರ ಭಾರಿ ಹೆಚ್ಚಳವಾಗಿದೆ. ದೇಶಾದ್ಯಂತ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮುಂಬೈಗೆ 1500 ರೂ ನಿಂದ 2500 ರೂ ಇದ್ದ ಬಸ್ ದರ ಈಗ 4500 ರಿಂದ 10,000 ರೂವರೆಗೂ ಏರಿಕೆಯಾಗಿದೆ. ಬೆಂಗಳೂರಿನಿಂದ ಪುಣೆಗೆ 1200 ರೂನಿಂದ 1600 ರೂ ಇದ್ದ ಟಿಕೆಟ್ ದರ ಈಗ 3500 ರಿಂದ 6000 ರೂ ಗೆ ಏರಿಕೆಯಾಗಿದೆ. ಖಾಸಗಿ ಬಸ್ ಗಳ ಸುಲಿಗೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
