ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ಇನ್ ಇಂದು 2025ರ ಭಾರತದ ಉನ್ನತ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವೃತ್ತಿಪರರು ತಮ್ಮ ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದಲು ಸೂಕ್ತವಾದ ಭಾರತದ 25 ದೊಡ್ಡ ಕಂಪನಿಗಳನ್ನು ಹೆಸರಿಸಲಾಗಿದೆ. ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್‌ನಲ್ಲಿನ ಲಕ್ಷಾಂತರ ವೃತ್ತಿಪರರ ಚಟುವಟಿಕೆಗಳನ್ನು ಆಧರಿಸಿ ಈ ಪಟ್ಟಿಯನ್ನು ರಚಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ಉದ್ಯೋಗಾವಕಾಶವನ್ನು ಕಂಡುಕೊಳ್ಳಲು ಇದು ಸಹಾಯಕವಾಗಲಿದೆ. ಇದರೊಂದಿಗೆ, ಬೇಡಿಕೆಯಲ್ಲಿರುವ ಕೌಶಲ್ಯಗಳು, ಉನ್ನತ ಸ್ಥಳಗಳು ಮತ್ತು ಈ ಕಂಪನಿಗಳಲ್ಲಿನ ಪ್ರಮುಖ ಉದ್ಯೋಗ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಅಭಿವೃದ್ಧಿ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಎಂಟು ಅಂಶಗಳ ಆಧಾರದ ಮೇಲೆ ಲಿಂಕ್ಡ್‌ಇನ್ ಡೇಟಾವನ್ನು ಬಳಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿಗಳ ಮೇಲೆ ಹೂಡಿಕೆ ಮಾಡುತ್ತಿರುವ ಮತ್ತು ಸದ್ಯದಲ್ಲಿಯೇ ನೇಮಕಾತಿಗಳನ್ನು ನಡೆಸುತ್ತಿರುವ ಸಂಸ್ಥೆಗಳನ್ನು ಈ ಪಟ್ಟಿ ಎತ್ತಿ ತೋರಿಸುತ್ತದೆ.
ಲಿಂಕ್ಡ್‌ಇನ್‌ನ ಕರಿಯರ್ ಎಕ್ಸ್‌ಪರ್ಟ್ ನಿರಾಜಿತಾ ಬ್ಯಾನರ್ಜಿ ಮಾತನಾಡಿ, “ಈ ವರ್ಷದ ಪಟ್ಟಿಯಿಂದ ತಿಳಿದುಬರುವ ಮುಖ್ಯ ವಿಷಯವೆಂದರೆ, ಕಂಪನಿಗಳು ಕೇವಲ ಈಗಿನ ಅಗತ್ಯಗಳಿಗಾಗಿ ಮಾತ್ರ ನೇಮಕಾತಿ ಮಾಡುತ್ತಿಲ್ಲ, ಬದಲಾಗಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿಗಳನ್ನು ಮಾಡುತ್ತಿವೆ. ಭಾರತದ ಉನ್ನತ 25 ಕಂಪನಿಗಳಲ್ಲಿ 19 ಕಂಪನಿಗಳು ತಂತ್ರಜ್ಞಾನ, ಹಣಕಾಸು ಮತ್ತು ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕ್ಷೇತ್ರಗಳಿಗೆ ಸೇರಿದವಾಗಿವೆ. ಈ ಕಂಪನಿಗಳು ತಾಂತ್ರಿಕ ಪರಿಣತಿ, ವಿವಿಧ ತಂಡಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ, ತ್ವರಿತ ಹೊಂದಾಣಿಕೆ ಮತ್ತು ಕಂಪನಿಯೊಂದಿಗೆ ಬೆಳೆಯುವಂತಹ ವೃತ್ತಿಪರರನ್ನು ಹುಡುಕುತ್ತಿವೆ. ಮೊದಲ ಅಥವಾ ಮುಂದಿನ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿ ಬೆಳೆಸಿಕೊಳ್ಳಲು ಉತ್ತಮ ಸಮಯ. ನಿಮ್ಮ ಮೂಲಭೂತ ಕೌಶಲ್ಯಗಳನ್ನು ಬಲಪಡಿಸಿಕೊಳ್ಳಿ, ಭವಿಷ್ಯದಲ್ಲಿ ಉಪಯುಕ್ತವಾಗುವ ಕೌಶಲ್ಯಗಳನ್ನು ಕಲಿಯಿರಿ ಮತ್ತು ಉದ್ಯಮಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಗಮನಿಸಿ. ಚಂಚಲ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿ ಸ್ಥಿರತೆಯೇ ನಿಮ್ಮನ್ನು ವಿಶಿಷ್ಟವಾಗಿ ಗುರುತಿಸುವ ಸೂಪರ್ ಪವರ್” ಎಂದಿದ್ದಾರೆ.
2025ರ ಟಾಪ್ 25 ಕಂಪನಿಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಆಕ್ಸೆಂಚರ್ (#2) ಮತ್ತು ಇನ್ಫೋಸಿಸ್ (#3) ನಂತರದ ಸ್ಥಾನಗಳಲ್ಲಿವೆ. ಕಾಗ್ನಿಜೆಂಟ್ 5ನೇ ಸ್ಥಾನದಲ್ಲಿದೆ. ಈ ವರ್ಷದ ಪಟ್ಟಿಯಲ್ಲಿ ಕಂಪ್ಯೂಟರ್, ಐಟಿ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳು ಭಾರತದಲ್ಲಿ ವೃತ್ತಿ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿವೆ. ಡೆವಲಪ್‌ಮೆಂಟ್ ಟೂಲ್ಸ್, ಡೇಟಾ ಸ್ಟೋರೇಜ್ ತಂತ್ರಜ್ಞಾನಗಳು ಮತ್ತು ಎಂಟರ್‌ಪ್ರೈಸ್ ಸಾಫ್ಟ್‌ವೇರ್ ವಿಭಾಗದಲ್ಲಿ ಕೌಶಲ್ಯ ಹೊಂದಿರುವವರಿಗೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿವೆ.
ಈ ಪಟ್ಟಿಯಲ್ಲಿರುವ 25 ಕಂಪನಿಗಳಲ್ಲಿ ಸುಮಾರು 12 ಕಂಪನಿಗಳು ಈ ವರ್ಷ ಹೊಸದಾಗಿ ಸೇರ್ಪಡೆಗೊಂಡಿವೆ. ಇದು ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಿರುವ ಅವಕಾಶಗಳಲ್ಲಿನ ಬದಲಾವಣೆಯನ್ನು ತೋರಿಸುತ್ತದೆ. ಮೊದಲ ಬಾರಿಗೆ ಸ್ಥಾನ ಪಡೆದ ಕಂಪನಿಗಳಲ್ಲಿ ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ (#4) ಅಗ್ರಸ್ಥಾನದಲ್ಲಿದ್ದರೆ, ನಂತರ ಸರ್ವಿಸ್ ನೌ (#17) ಮತ್ತು ಸ್ಟ್ರೈಪ್ (#21) ಇವೆ. ಹಣಕಾಸು ಸೇವಾ ಸಂಸ್ಥೆಗಳು ಈ ವರ್ಷದ ಪಟ್ಟಿಯಲ್ಲಿ ಏಳು ಸ್ಥಾನಗಳನ್ನು ಪಡೆದುಕೊಂಡಿದ್ದು, ಜೆಪಿಮೋರ್ಗನ್ ಚೇಸ್ (#7), ವೆಲ್ಸ್ ಫಾರ್ಗೊ (#15) ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ (#25) ಸೇರಿವೆ. ಈ ಕಂಪನಿಗಳಲ್ಲಿ ಬಿಸಿನೆಸ್ ಆಪರೇಷನ್ಸ್ ಅನಾಲಿಸ್ಟ್, ಪ್ರಾಡ್ ಅನಾಲಿಸ್ಟ್ ಮತ್ತು ಫೈನಾನ್ಷಿಯಲ್ ಅನಾಲಿಸ್ಟ್‌ನಂತಹ ಹುದ್ದೆಗಳಿಗೆ ಹೆಚ್ಚಿನ ನೇಮಕಾತಿ ನಡೆಯುತ್ತಿದೆ. ಇಲ್ಲಿ ಕ್ಯಾಪಿಟಲ್ ಮಾರ್ಕೆಟ್, ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮತ್ತು ವಾಣಿಜ್ಯ ಬ್ಯಾಂಕಿಂಗ್ ವಿಭಾಗದಲ್ಲಿ ಕೌಶಲ್ಯ ಹೊಂದಿರುವವರಿಗೆ ಹೆಚ್ಚಿನ ಬೇಡಿಕೆಯಿದೆ.
ಈ ಪಟ್ಟಿಯು ಜಾಗತಿಕ ತಂತ್ರಜ್ಞಾನ ಕಂಪನಿಗಳು ಭಾರತದಲ್ಲಿ ತಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿರುವುದನ್ನು ತೋರಿಸುತ್ತದೆ. ಅಮೆಜಾನ್ (#8), ಆಲ್ಫಾಬೆಟ್ (#9) ಮತ್ತು ಸೇಲ್ಸ್‌ಫೋರ್ಸ್ (#12) ಕಂಪನಿಗಳು ಸಾಫ್ಟ್‌ವೇರ್ ಇಂಜಿನಿಯರ್, ಡೇಟಾ ಅನಾಲಿಸ್ಟ್ ಮತ್ತು ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ. ಕೃತಕ ಬುದ್ಧಿಮತ್ತೆ, ಎಐ ಇಂಜಿನಿಯರಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಕೌಶಲ್ಯಗಳಿಗೆ ಈ ಸಂಸ್ಥೆಗಳಲ್ಲಿ ಭಾರಿ ಬೇಡಿಕೆಯಿದೆ. ಸಿನೊಪ್ಸಿಸ್ ಇಂಕ್ (#13), ಕಾಂಟಿನೆಂಟಲ್ (#14) ಮತ್ತು ಆರ್ ಟಿ ಎಕ್ಸ್ (#20) ಕಂಪನಿಗಳು ತಮ್ಮ ಡಿಸೈನ್ ಇಂಜಿನಿಯರಿಂಗ್, ಟೆಸ್ಟ್ ಇಂಜಿನಿಯರಿಂಗ್ ಮತ್ತು ಕ್ವಾಲಿಟಿ ಅಶೂರೆನ್ಸ್ ತಂಡಗಳಲ್ಲಿ ಹೂಡಿಕೆ ಮಾಡುತ್ತಿದ್ದು, ಈ ಕಂಪನಿಗಳಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್, ಸಿಗ್ನಲ್ ಪ್ರೊಸೆಸಿಂಗ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಮ್‌ಗಳ ಕೌಶಲ್ಯಗಳಿಗೆ ಬೇಡಿಕೆಯಿದೆ.
ಉನ್ನತ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ಆಸಕ್ತರು ಪಾಲಿಸಬೇಕಾದ ಸಲಹೆಗಳನ್ನು ನಿರಾಜಿತಾ ಅವರು ನೀಡಿದ್ದಾರೆ: ನಿಮ್ಮ ಪ್ರೊಫೈಲ್ ಅನ್ನು ಉತ್ತಮಗೊಳಿಸಿ, ಕಂಪನಿಗಳಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿ, ಕಂಪನಿಗಳನ್ನು ತಜ್ಞರಂತೆ ಸಂಶೋಧಿಸಿ, ನೆಟ್‌ವರ್ಕ್ ಅನ್ನು ಬೆಳೆಸಿಕೊಳ್ಳಿ ಮತ್ತು ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಹಾಗೂ ಕೌಶಲ್ಯಾಭಿವೃದ್ಧಿ ಮಾಡಿ.
2025ರ ಭಾರತದ ಟಾಪ್ 25 ಕಂಪನಿಗಳ ಪಟ್ಟಿ ಇಂತಿದೆ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಆಕ್ಸೆಂಚರ್, ಇನ್ಫೋಸಿಸ್, ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್, ಕಾಗ್ನಿಜಂಟ್, ಒರಾಕಲ್, ಜೆಪಿಮೋರ್ಗನ್ ಚೇಸ್, ಅಮೆಜಾನ್, ಆಲ್ಫಾಬೆಟ್, ದಿ ಡಿಪಾಸಿಟರಿ ಟ್ರಸ್ಟ್ & ಕ್ಲಿಯರಿಂಗ್ ಕಾರ್ಪೊರೇಷನ್ (ಡಿಟಿಸಿಸಿ), ಕ್ಯಾಪ್ ಜೆಮಿನಿ, ಸೇಲ್ಸ್‌ಫೋರ್ಸ್, ಸಿನೊಪ್ಸಿಸ್ ಇಂಕ್, ಕಾಂಟಿನೆಂಟಲ್, ವೆಲ್ಸ್ ಫಾರ್ಗೊ, ಹೆಚ್‌ಸಿಎಲ್ ಟೆಕ್, ಸರ್ವೀಸ್ ನೌ, ಮೋರ್ಗನ್ ಸ್ಟಾನ್ಲಿ, ಮಾಸ್ಟರ್ ಕಾರ್ಡ್, ಆರ್ ಟಿ ಎಕ್ಸ್, ಸ್ಟ್ರೈಪ್, ಅಟ್ಲಾಸಿಯನ್, ಎಂ ಎಸ್ ಸಿ ಐ ಇಂಕ್., ಎಲಿ ಲಿಲ್ಲಿ ಆಂಡ್ ಕಂಪನಿ, ಅಮೆರಿಕನ್ ಎಕ್ಸ್‌ಪ್ರೆಸ್.