ಭಾರತ ತನ್ನ ವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ದೇಶ – ವಿದೇಶಗಳಿಂದ ಜನರು ಭೇಟಿ ನೀಡುತ್ತಾರೆ. ಆದರೆ, ಉತ್ತರಾಖಂಡದಲ್ಲಿ ಚಕ್ರತಾ ಎಂಬ ಒಂದು ಸುಂದರ ಗಿರಿಧಾಮವಿದೆ, ಇಲ್ಲಿ ಕೇವಲ ಭಾರತೀಯರಿಗೆ ಮಾತ್ರ ಪ್ರವೇಶಾವಕಾಶವಿದೆ. ವಿದೇಶಿಗರಿಗೆ ಇಲ್ಲಿಗೆ ಭೇಟಿ ನೀಡಲು ಅನುಮತಿ ಇಲ್ಲ.
1866 ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಈ ಗಿರಿಧಾಮವು ನಂತರ ಕಾಂಟ್ ಬೋರ್ಡ್‌ನ ಸುಪರ್ದಿಗೆ ಹೋಯಿತು. ಪ್ರಸ್ತುತ ಇಲ್ಲಿ ಭಾರತೀಯ ಸೇನಾ ಶಿಬಿರವಿರುವುದರಿಂದ ಭದ್ರತಾ ಕಾರಣಗಳಿಗಾಗಿ ವಿದೇಶಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಭಾರತೀಯ ನಾಗರಿಕರು ಯಾವುದೇ ನಿರ್ಬಂಧವಿಲ್ಲದೆ ಈ ಸುಂದರ ತಾಣಕ್ಕೆ ಭೇಟಿ ನೀಡಬಹುದು.
ಚಕ್ರತಾ ತನ್ನ ವಿಶಿಷ್ಟ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಟೈಗರ್ ಫಾಲ್ಸ್ ಎಂಬ ಸುಂದರ ಜಲಪಾತವಿದೆ. ನಗರದ ಗದ್ದಲದಿಂದ ದೂರವಿರಲು ಬಯಸುವವರಿಗೆ ಇದು ಶಾಂತಿಯುತ ತಾಣವಾಗಿದೆ. ಚಕ್ರತಾದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬುಧೇರ್ ಗುಹೆಯು ಉತ್ತರಾಖಂಡದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್‌ಗೆ ಇದು ಹೇಳಿ ಮಾಡಿಸಿದ ಜಾಗ.
ಚಿಲ್ಮಿರಿ ನೆಕ್ ಚಕ್ರತಾದ ಮತ್ತೊಂದು ಜನಪ್ರಿಯ ಪ್ರವಾಸಿ ತಾಣ. ಇದು ಪೈನ್ ಕಾಡುಗಳ ನಡುವೆ ಇರುವ ಚಕ್ರತಾದ ಅತಿ ಎತ್ತರದ ಶಿಖರ. ಇಲ್ಲಿಂದ ಹಿಮಾಲಯ ಪರ್ವತ ಶ್ರೇಣಿಯ ವಿಹಂಗಮ ನೋಟವನ್ನು ಸವಿಯಬಹುದು. ಟ್ರೆಕ್ಕಿಂಗ್ ಮಾಡುವ ಆಸಕ್ತಿ ಇರುವವರಿಗೂ ಇದು ಉತ್ತಮ ತಾಣವಾಗಿದೆ.
ಹೀಗೆ ಚಕ್ರತಾ ತನ್ನ ವಿಶಿಷ್ಟ ನಿಯಮ ಮತ್ತು ನೈಸರ್ಗಿಕ ಸೌಂದರ್ಯದಿಂದ ಭಾರತೀಯ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.