ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯ ಉನ್ನತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜುನಾ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು ಆಚಾರ್ಯ ಪೀಠಕ್ಕೆ ಏರಿ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತು ಶ್ರೀ ದತ್ ಜಯಂತಿಯ ಸಂದರ್ಭದಲ್ಲಿ ಕಂಖಲ್ ನ ಶ್ರೀ ಹರಿಹರ ಆಶ್ರಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಕಾಶಿ-ವಿಶ್ವನಾಥ ಕಾರಿಡಾರ್, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಕೇದಾರನಾಥದಲ್ಲಿ ದೇವಾಲಯ ಸಂಕೀರ್ಣದ ನಿರ್ಮಾಣವು ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
“ರಾಜನ ಕೆಲಸವನ್ನು ಪರಿಶೀಲಿಸುವ ಹಕ್ಕು ಸಂತರು ಮತ್ತು ಸಾಧುಗಳಿಗೆ ಮಾತ್ರ ಇದೆ. ಇಡೀ ಜಗತ್ತನ್ನು ಒಂದು ಕುಟುಂಬವಾಗಿ ಪರಿಗಣಿಸುವವನೇ ನಿಜವಾದ ರಾಜ ಎಂದು ಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಜುನಾ ಅಖಾಡದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಅವರು ತಪಸ್ಸು ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅನುಸರಿಸಿ ಲಕ್ಷಾಂತರ ಸಂತರಿಗೆ ದೀಕ್ಷೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.