ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತರು, ಮಾಣಿಕ್ ಷಾ ಪರೇಡ್ ಮೈದಾದಲ್ಲಿ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್.15ರಂದು ಬೆಂಗಳೂರು ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗುವುದು ಎಂದರು.
ಬೆಳಿಗ್ಗೆ 8 ಗಂಟೆಯಿಂದ 11ರವರೆಗೆ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಬಿಆರ್ ವಿ ಜಕ್ಷನ್ ನಿಂದ ಕಾಮರಾಜ ಜಕ್ಷನ್ ವರರೆಗೆ ಹಾಗೂ ಕಬ್ಬನ್ ಉದ್ಯಾನವನದ ಸುತ್ತಮುತ್ತ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದರು.
ಈ ಬಾರಿ ಕಾರ್ಯಕ್ರಮಕ್ಕೆ ಬರುವವರುಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 8 ಗಂಟೆಯೊಳಗೆ ಆಗಮಿಸಬೇಕು. ಸಿಗರೇಟ್, ಕೊಡೆ, ಲೈಟರ್, ಲಗೇಜ್ ಬ್ಯಾಗ್ ತರುವಂತಿಲ್ಲ ಎಂದು ತಿಳಿಸಿದರು.
ವಿಶೇಷವಾಗಿ 100ಕ್ಕೂ ಹೆಚ್ಚು ಸಿಸಿಕ್ಯಾಮರಾ ಅಳವಡಿಸಲಾಗಿದೆ. ಈ ಬಾರಿ ಪರೇಡ್ ನಲ್ಲಿ 30 ತುಕಡಿಗಳು ಭಾಗಿಯಾಗಲಿವೆ. ಗೋವಾ ಪೊಲೀಸ್, ಬಿಎಸ್ ಎಫ್, ಡಾಗ್ ಸ್ಕಾಡ್, ಶಾಲಾ ಮಕ್ಕಳಿಂದ ಪರೇಡ್ ನಡೆಯಲಿದೆ. ಪಿಂಕ್ ಪಾಸ್ ಇರುವವರು ಗೇಟ್ ನಂ.2ರಿಂದ ಪ್ರವೇಶ ಪಡೆಯಬಹುದು. ವೈಟ್ ಪಾಸ್ ಇರುವವರು, ಮಾಧ್ಯಮದವರು ಗೇಟ್ 4ರಿಂದ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಭದ್ರತೆಗೆ 2000ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.