ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸೇವಾ ವಿವರಗಳನ್ನು ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ದಾಖಲಿಸುವಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ಆದೇಶದಲ್ಲಿ 1ನೇ ಏಪ್ರಿಲ್ 2021 ರ ನಂತರ ರಾಜ್ಯ ಸರ್ಕಾರದ ಸೇವೆಗೆ ನೇಮಕಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ಹೆಚ್ ಆರ್ ಎಂ ಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (Electronic Service Register – ESR) ನಲ್ಲಿಯೇ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ.
ಉಲ್ಲೇಖ 2ರ ತಾಂತ್ರಿಕ ಸಮಿತಿ ಸಭೆಯ ನಡವಳಿಯಲ್ಲಿ ಏಪ್ರಿಲ್ 2021 ರ ಪೂರ್ವದಲ್ಲಿ ನೇಮಕಗೊಂಡಿರುವ ಎಲ್ಲಾ ಅಧಿಕಾರಿ ನೌಕರರ ಸೇವಾ ವಿವರಗಳನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿ ದಾಖಲಿಸುವ ನಿರ್ದೇಶನ ನೀಡಲಾಗಿತ್ತು.
ಉಲ್ಲೇಖ 3 ರಲ್ಲಿ ಹೆಚ್ ಆರ್ ಎಂ ಎಸ್-1 ತಂತ್ರಾಂಶದಲ್ಲಿನ ಸೇವಾ ವಹಿ ಭಾಗದಲ್ಲಿ ದಾಖಲಾಗಿರುವ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಿವರಗಳ ಮಾಹಿತಿಗಳನ್ನು ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಹಿಸಲು ಕ್ರಮ ಕೈಗೊಳ್ಳಲು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಹಾಗೂ ಇನ್ನು ಮುಂದೆ ನೇಮಕಗೊಳ್ಳುವ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಿವರಗಳನ್ನು ಹೆಚ್ ಆರ್ ಎಂ ಎಸ್ -2.0 ತಂತ್ರಾಂಶದ ವಿದ್ಯುನ್ಮಾನ ಸೇವಾ ವಹಿ ಯಲ್ಲಿಯೇ ದಾಖಲಿಸಿ ನಿರ್ವಹಿಸಲು ಸೂಚಿಸಿದೆ.

