ಬೆಂಗಳೂರು: 2026ರ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣದಲ್ಲಿ www.kseab.karnataka.gov.in ದಿನಾಂಕ: 20.09.2025ರಂದು ಪ್ರಕಟಿಸಲಾಗಿದೆ.
ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಸದರಿ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಂಡು ತಮ್ಮ ಶಾಲಾ/ಕಾಲೇಜು ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ.
ಮಂಡಳಿಯಿಂದ ಪ್ರಕಟಿಸಿರುವ 2026ರ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ದಿನಾಂಕ: 20.09.2025 ರಿಂದ 09.10.2025ರವರೆಗೆ ಕಾಲಾವಕಾಶವನ್ನು ನೀಡಲಾಗಿರುತ್ತದೆ.
ಆಕ್ಷೇಪಣೆಗಳನ್ನು ಮಂಡಲಿಯ ಇ-ಮೇಲ್ ವಿಳಾಸ: chairpersonksab@gmail.com ಗೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗೆ ಕಳುಹಿಸುವುದು. ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.








