ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಸಿಇಟಿ ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾಗಿದೆ. ವಿವಿಧ ಕೋರ್ಸ್ ಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿ ಅಂತಿಮವಾಗಿಲ್ಲ. ಹೀಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಒಂದು ವಾರ ವಿಳಂಬವಾಗಲಿದೆ ಎಂದು ಹೇಳಲಾಗಿದೆ.
2025- 26 ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 24 ರಂದು ಫಲಿತಾಂಶ ಪ್ರಕಟಿಸಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾದ ನೀಟ್ ಫಲಿತಾಂಶವೂ ಜೂನ್ 14ರಂದು ಪ್ರಕಟವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಟ್ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆ ನಡೆಸಲಿದೆ.
ಮೊದಲ ಸುತ್ತಿನ ಸೀಟು ಹಂಚಿಕೆ ಮುಗಿಯುತಿದ್ದಂತೆ ಇಂಜಿನಿಯರಿಂಗ್ ಸೇರಿ ಇತರೆ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.