ದಾವಣಗೆರೆ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದಾವಣಗೆರೆಯ ಕಾಡಜ್ಜಿ ಗ್ರಾಮದಲ್ಲಿ ನಡೆದಿದೆ.
ಕಲೀಂ ಉಲ್ಲಾ ಎಂಬಾತ ಪತ್ನಿ ಕೊಲೆಗೈದ ಆರೋಪಿ. 5 ವರ್ಷದ ಹಿಂದೆ ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪತ್ನಿ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರ ತಿಳಿದ ಕಲೀಂ ಉಲ್ಲಾ ಹಿರಿಯರಿಗೆ ವಿಷಯ ತಿಳಿಸಿದ್ದ. ಆದರೆ ಹಿರಿಯರು ಆತನ ಪತ್ನಿ ಅಕ್ರಮ ಸಂಬಂಧ ಹೊಂದಿರುವುದನ್ನು ನಂಬಿರಲಿಲ್ಲ. ಹೀಗಾಗಿ ರಹಸ್ಯವಾಗಿ ಸಿಸಿ ಕ್ಯಾಮರಾ ಇರಿಸಿ ಬೆಡ್ರೂಮ್ ನಲ್ಲಿ ಪತ್ನಿ ಬೇರೆ ವ್ಯಕ್ತಿಯೊಂದಿಗೆ ಇದ್ದ ಖಾಸಗಿ ವಿಡಿಯೋ ಇಟ್ಟುಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಇಬ್ಬರು ಮಕ್ಕಳು ತನ್ನೊಂದಿಗೆ ಇರಬೇಕು ಎಂದು ಮನವಿ ಮಾಡಿಕೊಂಡಿದ್ದ.
ಆದರೆ ಹಿರಿಯರು ಒಂದು ಮಗು ಪತಿ ಬಳಿ, ಮತ್ತೊಂದು ಮಗು ಪತ್ನಿಯ ಬಳಿ ಇರಲಿ ಎಂದು ಹೇಳಿದ್ದಾರೆ. ಬಾಲ ನ್ಯಾಯ ಮಂಡಳಿಗೆ ಮಕ್ಕಳನ್ನು ಕೌನ್ಸೆಲಿಂಗ್ ಗೆ ಕರೆದುಕೊಂಡು ಹೋಗುವಾಗ ಕಲೀಂ ಉಲ್ಲಾ ಹಲವು ಬಾರಿ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ. ಬಿಡಿಸಲು ಬಂದ ಪತ್ನಿಯ ತಾಯಿಗೂ ಚಾಕುವಿನಿಂದ ಇರಿದಿದ್ದು, ಬಡಾವಣೆ ಠಾಣೆ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮೃತಪಟ್ಟಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.