ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಉತ್ತಮ ಅಂಕ ಗಳಿಸುವುದು ಮುಖ್ಯವೆಂಬ ಅರಿವಿದ್ದರೂ, ಕೆಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ವಿಚಿತ್ರ ಮಾರ್ಗಗಳನ್ನು ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಉತ್ತರ ಪತ್ರಿಕೆಗಳಲ್ಲಿ ಹಣ ಇಟ್ಟು ಶಿಕ್ಷಕರಿಗೆ ಲಂಚ ನೀಡುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೇರಳದ ಶಿಕ್ಷಕರು ಮತ್ತು ಮೇಲ್ವಿಚಾರಕರು ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿಯ ಪರೀಕ್ಷಾ ಉತ್ತರ ಪತ್ರಿಕೆಗಳಲ್ಲಿ ಇಂತಹ ಹಲವಾರು ಮನವಿಗಳನ್ನು ಸ್ವೀಕರಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಸಲುವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯ ಎಂದು ತಿಳಿಸಿದರೆ, ಇನ್ನೂ ಕೆಲವರು ಪಾಸ್ ಮಾಡಿದರೆ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾರೆ.
ಒಬ್ಬ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ₹500 ಮುಖಬೆಲೆಯ ನೋಟನ್ನು ಇಟ್ಟು, “ಸರ್, ಇದರಲ್ಲಿ ಚಹಾ ಕುಡಿಯಿರಿ ಮತ್ತು ದಯವಿಟ್ಟು ನನ್ನನ್ನು ಪಾಸ್ ಮಾಡಿ” ಎಂದು ಬರೆದಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ₹500 ನೋಟಿನೊಂದಿಗೆ, “ದಯವಿಟ್ಟು ನನ್ನನ್ನು ಪಾಸ್ ಮಾಡಿ, ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ” ಎಂದು ಮನವಿ ಮಾಡಿದ್ದಾನೆ. “ನೀವು ನನ್ನನ್ನು ಪಾಸ್ ಮಾಡದಿದ್ದರೆ, ನನ್ನ ಪೋಷಕರು ನನ್ನನ್ನು ಕಾಲೇಜಿಗೆ ಕಳುಹಿಸುವುದಿಲ್ಲ” ಎಂದು ಇನ್ನೊಬ್ಬ ವಿದ್ಯಾರ್ಥಿ ಬರೆದುಕೊಂಡಿದ್ದಾನೆ. “ನೀವು ನನ್ನನ್ನು ಪಾಸ್ ಮಾಡಿದರೆ, ನಾನು ನಿಮಗೆ ಹಣ ನೀಡುತ್ತೇನೆ” ಎಂದು ಮತ್ತೊಬ್ಬ ಹೇಳಿದ್ದಾನೆ.
ಕೇರಳದಲ್ಲಿ ಮಾರ್ಚ್ 3 ರಿಂದ ಮಾರ್ಚ್ 26 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆದವು. ಕೇರಳದಲ್ಲಿ 2,964 ಕೇಂದ್ರಗಳು, ಲಕ್ಷದ್ವೀಪದಲ್ಲಿ ಒಂಬತ್ತು ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಏಳು ಕೇಂದ್ರಗಳು ಸೇರಿದಂತೆ ಒಟ್ಟು 4.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗಿದ್ದರು.
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಒತ್ತಡ ವಿದ್ಯಾರ್ಥಿಗಳ ಮೇಲೆ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಘಟನೆಗಳು ಕನ್ನಡಿ ಹಿಡಿದಿವೆ. ಕೇರಳ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶಗಳು ಮೇ 8 ರೊಳಗೆ ಪ್ರಕಟವಾಗುವ ಸಾಧ್ಯತೆ ಇದೆ.