ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿದ್ದವನು ಸನ್ನಡತೆ ಕಾರಣಕ್ಕೆ ಬಿಡುಗಡೆಯಾಗಿದ್ದು, ಇದೀಗ ಬಿಜೆಪಿ ಸಂಸದ ಹಾಗೂ ಶಾಸಕರು ಪಾಲ್ಗೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ಇದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಈ ಫೋಟೋ ಹಂಚಿಕೊಂಡಿರುವ ತೃಣ ಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಹಿತ್ರಾ, ಅವನನ್ನು ಮತ್ತೆ ಕಂಬಿ ಹಿಂದೆ ನೋಡಬಯಸುತ್ತೇನೆ ಎಂದು ಹೇಳಿದ್ದಾರೆ.
ಗುಜರಾತಿನ ದಹೋದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ನೀರು ಸರಬರಾಜು ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಶೈಲೇಶ್ ಭಟ್ ಪಾಲ್ಗೊಂಡಿದ್ದು ಇದರಲ್ಲಿ ದಹೋದ್ ಕ್ಷೇತ್ರದ ಸಂಸದ ಜಸ್ವಂತ್ ಬಹಾಬ್ಬರ್ ಹಾಗೂ ಅವರ ಸಹೋದರ ಶಾಸಕ ಶೈಲೇಶ್ ಬಹಾಬ್ಬರ್ ಕೂಡ ಉಪಸ್ಥಿತರಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಫೋಟೋವನ್ನು ಹಂಚಿಕೊಂಡಿರುವ ಮಹುವಾ ಮೊಹಿತ್ರಾ, ಈತನನ್ನು ನಾನು ಮತ್ತೆ ಜೈಲು ಕಂಬಿ ಹಿಂದೆ ನೋಡಲು ಬಯಸುತ್ತೇನೆ. ಸರ್ಕಾರಿ ಕಾರ್ಯಕ್ರಮ ಒಂದರಲ್ಲಿ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಪಾಲ್ಗೊಂಡಿರುವುದು ನಿಜಕ್ಕೂ ಆಘಾತಕಾರಿ ಎಂದು ಟ್ವೀಟ್ ಮಾಡಿದ್ದಾರೆ.
2002ರಲ್ಲಿ ನಡೆದ ಗುಜರಾತ್ ದಂಗೆ ವೇಳೆ ಬಿಲ್ಕಿಸ್ ಬಾನು ಮೇಲೆ ಶೈಲೇಶ್ ಭಟ್ ಸೇರಿದಂತೆ 11 ಮಂದಿ ಅತ್ಯಾಚಾರವೆಸಗಿದ್ದು, ಏಳು ಮಂದಿಯನ್ನು ಸಹ ಹತ್ಯೆ ಮಾಡಿದ್ದರು. 2008ರಲ್ಲಿ ಇವರುಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, 2022ರ ಆಗಸ್ಟ್ 15 ರಂದು ಸನ್ನಡತೆ ಕಾರಣಕ್ಕೆ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು 2022ರ ಡಿಸೆಂಬರ್ ನಲ್ಲಿ ಈ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಅಪರಾಧಿ, ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
https://twitter.com/MahuaMoitra/status/1640076987073982464?ref_src=twsrc%5Etfw%7Ctwcamp%5Etweetembed%7Ctwterm%5E1640076987073982464%7Ctwgr%5E82ed0b275f735c8affdc37d451a9b9a4b74352cf%7Ctwcon%5Es1_&ref_url=https%3A%2F%2Fwww.timesnownews.com%2Findia%2Fi-want-these-monsters-mahua-moitra-shares-pic-of-bilkis-banos-rapist-on-stage-with-bjp-mla-article-99021632