ಬೆಂಗಳೂರು: ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ್ದು ಪಕ್ಷದ ನಿರ್ಧಾರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆ.ಎನ್. ರಾಜಣ್ಣ ನನ್ನ ಸ್ನೇಹಿತರು. ನನ್ನ ಆಪ್ತರಾಗಿದ್ದಾರೆ. 25 ವರ್ಷದಿಂದ ಜೊತೆಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು ಪಕ್ಷದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಸಚಿವ ಕೆ.ನ್. ರಾಜಣ್ಣ ರಾಜೀನಾಮೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ನಿರ್ಧಾರದಿಂದ ನನಗೂ ಕೂಡ ನೋವಾಗುತ್ತಿದೆ. ಆದರೆ, ಪಕ್ಷದ ನಿರ್ಧಾರವಾಗಿರುವುದರಿಂದ ನಾವು ಏನೂ ಮಾಡೋಕಾಗಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಚಿವರು, ಶಾಸಕರು, ಸಿಎಲ್ಪಿ ನಾಯಕರ ವ್ಯಾಪ್ತಿಗೆ ಬರುತ್ತಾರೆ. ನಮ್ಮ ವ್ಯಾಪ್ತಿಗೆ ಬರಲ್ಲ, ಅಶಿಸ್ತು ತೋರಿಸಿದರೆ ಸಣ್ಣಪುಟ್ಟ ನೋಟಿಸ್ ಕೊಡಬಹುದು. ಆದರೆ, ಕೆ.ಎನ್. ರಾಜಣ್ಣ ಅವರ ವಜಾಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಸಂಪುಟದಿಂದ ವಜಾಗೊಳಿಸಿರುವುದು ಪಕ್ಷದ ನಿರ್ಧಾರ. ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾಗೊಳಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಕೂಡ ಮುಖ್ಯಮಂತ್ರಿಯವರಿಗೆ ಕೇಳಿದೆ. ಅವರು ಮಾಹಿತಿ ತಿಳಿಸಿದರು. ಇಷ್ಟು ಮಾತ್ರ ನನಗೆ ಗೊತ್ತು ಎಂದು ಹೇಳಿದ್ದಾರೆ.