ಹೈದರಾಬಾದಿ ಸ್ಪೆಷಲ್: ಡಬಲ್ ಮಸಾಲಾ ಚಿಕನ್ ಬಿರಿಯಾನಿ !

ಬಿರಿಯಾನಿ ಅಂದ್ರೆನೆ ಒಂದು ಹಬ್ಬ. ಅದರಲ್ಲೂ ಹೈದರಾಬಾದಿ ಚಿಕನ್ ಧಮ್ ಬಿರಿಯಾನಿ ಅಂದ್ರೆ ಕೇಳಬೇಕೆ! ನಿಜಾಮರ ಕಾಲದ ಬಿರಿಯಾನಿಗೆ ನಮ್ಮೂರಿನ ಮಸಾಲೆಗಳ ರುಚಿ ಸೇರಿದ್ರೆ ಅದರ ಗಮ್ಮತ್ತೇ ಬೇರೆ. ಬೇರೆ ಬಿರಿಯಾನಿಗಳಿಗಿಂತ ಇದು ಕೊಂಚ ಖಾರವಾಗಿದ್ದರೂ, ತಿನ್ನುವಾಗ ಸಿಗೋ ಮಸಾಲೆಯ ಪ್ರಮಾಣ ಮಾತ್ರ ಕಡಿಮೆಯಿರುತ್ತೆ. ಹೀಗಾಗಿಯೇ ಅನೇಕರು ಬಿರಿಯಾನಿ ಜೊತೆ ಮಿರ್ಚಿ ಕಾ ಸಾಲನ್ ಹಾಕಿಕೊಂಡು ತಿಂದ್ರೆ ತೃಪ್ತಿ ಪಡ್ತಾರೆ.

ಇನ್ಮುಂದೆ ಆ ಚಿಂತೆ ಬಿಡಿ! ನಿಮಗಾಗಿ ನಾವು ತಂದಿದ್ದೇವೆ ಡಬಲ್ ಮಸಾಲಾ ಚಿಕನ್ ಧಮ್ ಬಿರಿಯಾನಿ ರೆಸಿಪಿ. ಹೆಸರೇ ಹೇಳುವಂತೆ ಇದರಲ್ಲಿ ಮಸಾಲೆ ದುಪ್ಪಟ್ಟು! ಹೌದು, ಇದು ಹೈದರಾಬಾದಿ ಬಿರಿಯಾನಿ ಥರಾನೇ ಇದ್ರೂ, ಮಸಾಲೆಗಳನ್ನ ಬ್ಯಾಲೆನ್ಸ್ ಮಾಡೋದು ಮತ್ತೆ ಧಮ್ ಮಾಡೋ ವಿಧಾನದಲ್ಲಿ ಕೊಂಚ ಬದಲಾವಣೆ ಇದೆ ಅಷ್ಟೆ.

ನೀವು ಕಡಿಮೆ ಖಾರ ಇಷ್ಟಪಡೋರಾದ್ರೆ ಈ ಹೈದರಾಬಾದಿ ಚಿಕನ್ ಧಮ್ ಬಿರಿಯಾನಿ ರೆಸಿಪಿನೂ ನೋಡಬಹುದು.

ನೆನಪಿಡಿ:

  • ಒಂದು ಗಂಟೆ ನೆನೆಸಿದ, ವರ್ಷ ಹಳೆಯ ಬಾಸ್ಮತಿ ಅಕ್ಕಿ ಬಳಸಿ.
  • ಚಿಕನ್‌ಗೆ ಚೆನ್ನಾಗಿ ಮಸಾಲೆ ಹಚ್ಚಿ ಕನಿಷ್ಠ 3 ಗಂಟೆ ಅಥವಾ ರಾತ್ರಿಯಿಡೀ ಫ್ರಿಡ್ಜ್‌ನಲ್ಲಿಡಿ.
  • ಡಬಲ್ ಮಸಾಲಾ ಅಂದ್ರೆ ಖಾರ ಜಾಸ್ತಿಯಿದ್ರೂ ತಿನ್ನೋಕೆ ಹಿತವಾಗಿರಬೇಕು. ಅದಕ್ಕಾಗಿ ಮೊಸರು, ಫ್ರೆಶ್ ಕ್ರೀಮ್, ನಿಂಬೆರಸ ಬಳಸಿ.
  • ಧಮ್ ಮಾಡುವಾಗ ಮಸಾಲೆ ಸೀದು ಹೋಗಬಾರ್ದು ಅಂದ್ರೆ ಕುದಿಯೋ ನೀರು ಹಾಕಿ ಮಿಕ್ಸ್ ಮಾಡಿ.
  • ಚಿಕನ್‌ಗೆ ಮಸಾಲೆ ಹಚ್ಚುವಾಗ ಈರುಳ್ಳಿನ ಚೆನ್ನಾಗಿ ಹಿಂಡಿ ಹಾಕಿ.
  • ಬಿರಿಯಾನಿಗೆ ತುಪ್ಪ ಸ್ವಲ್ಪ ಜಾಸ್ತಿನೇ ಇರಲಿ.
  • ಈರುಳ್ಳಿ ಹುರಿದ ಎಣ್ಣೆ ಬಳಸಿದ್ರೆ ರುಚಿ ಜಾಸ್ತಿ.
  • ಒಣಗಿದ ಗುಲಾಬಿ ದಳಗಳು ವಿಶೇಷ ರುಚಿ ನೀಡುತ್ತೆ. ಇಲ್ಲದಿದ್ರೆ ರೋಸ್ ವಾಟರ್ ಹಾಕಬಹುದು.
  • ಬಿರಿಯಾನಿ ತಳ ಹಿಡಿಯಬಾರ್ದು ಅಂದ್ರೆ ಮೊದಲು ಹೈ ಫ್ಲೇಮ್‌ನಲ್ಲಿ ಆವಿ ಬರೋವರೆಗೂ ಬೇಯಿಸಿ, ನಂತರ ನಾಲ್ಕು ಬದಿಗಳಲ್ಲಿ ತಲಾ 2 ನಿಮಿಷ ಸಿಮ್‌ನಲ್ಲಿಡಿ.
  • ಧಮ್ ಮಾಡುವಾಗ ಪಾತ್ರೆ ಕೆಳಗೆ ಸ್ಟ್ಯಾಂಡ್ ಇಡಿ.
  • ಕುದಿಯೋ ನೀರಿಗೆ ಉಪ್ಪು ಹಾಕಿ.
  • ಅಕ್ಕಿನ 60% ಮಾತ್ರ ಬೇಯಿಸಿ.
  • ಅಕ್ಕಿ ಹಾಕುವ ಮುನ್ನ ಪಾತ್ರೆ ಅಂಚಿನಲ್ಲಿರುವ ಮಸಾಲೆನ ಕ್ಲೀನ್ ಮಾಡಿ.

ಬೇಕಾಗುವ ಸಾಮಗ್ರಿಗಳು (ಡಬಲ್ ಮಸಾಲೆ ಚಿಕನ್‌ಗಾಗಿ):

700 ಗ್ರಾಂ ಚಿಕನ್, 250 ಮಿಲಿ ಮೊಸರು, 1/4 ಕಪ್ ಹಾಲಿನ ಕೆನೆ, 2 ಟೇಬಲ್ ಸ್ಪೂನ್ ತುಪ್ಪ, 1/4 ಕಪ್ ಈರುಳ್ಳಿ ಹುರಿದ ಎಣ್ಣೆ, ಉಪ್ಪು, 1 ಟೇಬಲ್ ಸ್ಪೂನ್ ಶಾಹಿ ಜೀರಾ, 10 ಲವಂಗ, 8 ಏಲಕ್ಕಿ, 2 ಇಂಚು ಚಕ್ಕೆ, 2 ಮರಾಠಿ ಮೊಗ್ಗು, 1 ಬಿರಿಯಾನಿ ಎಲೆ, 1 ಜಾಪತ್ರೆ, 1 ಟೇಬಲ್ ಸ್ಪೂನ್ ಏಲಕ್ಕಿ ಪುಡಿ, 1 ಟೇಬಲ್ ಸ್ಪೂನ್ ಹುರಿದ ಜೀರಿಗೆ ಪುಡಿ, 1 ಟೇಬಲ್ ಸ್ಪೂನ್ ಹುರಿದ ಕೊತ್ತಂಬರಿ ಪುಡಿ, 2 ಟೇಬಲ್ ಸ್ಪೂನ್ ಖಾರದ ಪುಡಿ, 1.5 ಟೇಬಲ್ ಸ್ಪೂನ್ ಉಪ್ಪು, 1 ಟೇಬಲ್ ಸ್ಪೂನ್ ಗರಂ ಮಸಾಲಾ, 1/2 ಕಪ್ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನಾ ಸೊಪ್ಪು, 2 ದೊಡ್ಡ ಈರುಳ್ಳಿ (ಹುರಿದಿದ್ದು), 2.5 ಟೇಬಲ್ ಸ್ಪೂನ್ ನಿಂಬೆರಸ, 1.5 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್.

ಬಿರಿಯಾನಿ ರೈಸ್‌ಗಾಗಿ:

2.5 ಕಪ್ ಬಾಸ್ಮತಿ ಅಕ್ಕಿ, 2.5 ಲೀಟರ್ ನೀರು, 5 ಟೇಬಲ್ ಸ್ಪೂನ್ ಉಪ್ಪು, 1 ಟೇಬಲ್ ಸ್ಪೂನ್ ಶಾಹಿ ಜೀರಾ, 10 ಲವಂಗ, 6 ಏಲಕ್ಕಿ, 2 ಇಂಚು ಚಕ್ಕೆ, 1 ಜಾಪತ್ರೆ, 2 ಮರಾಠಿ ಮೊಗ್ಗು, 2 ಅನಾನಸ್ ಹೂವು, 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 3 ಟೇಬಲ್ ಸ್ಪೂನ್ ಪುದೀನಾ ಸೊಪ್ಪು, 1 ಟೇಬಲ್ ಸ್ಪೂನ್ ನಿಂಬೆರಸ, 3 ಟೇಬಲ್ ಸ್ಪೂನ್ ಒಣಗಿದ ಗುಲಾಬಿ ದಳಗಳು, 4 ಹಸಿಮೆಣಸಿನಕಾಯಿ (ಸೀಳಿದ್ದು).

ಧಮ್ ಮಾಡಲು:

ಮೈದಾ ಹಿಟ್ಟಿನ ಮುದ್ದೆ, 1/4 ಟೀ ಸ್ಪೂನ್ ಗರಂ ಮಸಾಲಾ, 1/2 ಕಪ್ ತುಪ್ಪ, 1/4 ಕಪ್ ಈರುಳ್ಳಿ ಹುರಿದ ಎಣ್ಣೆ, 1/4 ಕಪ್ ಹಾಲಿನಲ್ಲಿ ನೆನೆಸಿದ ಕೇಸರಿ ದಳ, 2 ಟೇಬಲ್ ಸ್ಪೂನ್ ಹುರಿದ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1/3 ಕಪ್ ಕುದಿಯೋ ನೀರು.

ಮಾಡುವ ವಿಧಾನ:

  1. ಚಿಕನ್‌ಗೆ ಮಸಾಲೆ ಸಾಮಗ್ರಿಗಳನ್ನೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡೀ ಅಥವಾ ಕನಿಷ್ಠ 3 ಗಂಟೆ ಫ್ರಿಡ್ಜ್‌ನಲ್ಲಿಡಿ.
  2. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದು ಗಂಟೆ ನೆನೆಸಿ.
  3. ನೀರು ಕುದಿಸಿ, ಅದರಲ್ಲಿ ರೈಸ್ ಮಸಾಲೆ ಪದಾರ್ಥಗಳನ್ನು ಹಾಕಿ ಕುದಿಯಲು ಬಿಡಿ.
  4. ನೆನೆಸಿದ ಅಕ್ಕಿ ಹಾಕಿ 60% ಬೇಯಿಸಿ.
  5. ಕುದಿಯುತ್ತಿರುವ ನೀರಿನಿಂದ 100 ಮಿಲಿ ನೀರನ್ನು ಮ್ಯಾರಿನೇಟ್ ಮಾಡಿದ ಚಿಕನ್‌ಗೆ ಹಾಕಿ ಮಿಕ್ಸ್ ಮಾಡಿ.
  6. ಪಾತ್ರೆ ಅಂಚಿನಲ್ಲಿರುವ ಮಸಾಲೆ ಕ್ಲೀನ್ ಮಾಡಿ.
  7. 60% ಬೆಂದ ಅನ್ನವನ್ನು ಚಿಕನ್ ಮೇಲೆ ಎರಡು ಪದರಗಳಲ್ಲಿ ಹಾಕಿ. ನಂತರ 70% ಮತ್ತು 80% ಬೆಂದ ಅನ್ನವನ್ನು ಪದರಗಳಾಗಿ ಹಾಕಿ ಸಮವಾಗಿ ಹರಡಿ.
  8. ಧಮ್ ಮಾಡುವ ಸಾಮಗ್ರಿಗಳನ್ನೆಲ್ಲ ಅನ್ನದ ಮೇಲೆ ಹಾಕಿ. ತುಪ್ಪ, ಎಣ್ಣೆ, ಕೇಸರಿ ಹಾಲು ಎಲ್ಲ ಕಡೆ ಹರಡಿ. ಕುದಿಯೋ ನೀರನ್ನು ಪಾತ್ರೆ ಅಂಚಿನಲ್ಲಿ ಹಾಕಿ.
  9. ಮೈದಾ ಹಿಟ್ಟಿನಿಂದ ಪಾತ್ರೆಯ ಮುಚ್ಚಳವನ್ನು ಭದ್ರವಾಗಿ ಮುಚ್ಚಿ. ಸಣ್ಣ ರಂಧ್ರ ಮಾಡಿ.
  10. ಹೈ ಫ್ಲೇಮ್‌ನಲ್ಲಿ ಆವಿ ಬರುವವರೆಗೂ ಬೇಯಿಸಿ. ನಂತರ ಉರಿ ಕಡಿಮೆ ಮಾಡಿ ನಾಲ್ಕು ಬದಿಗಳಲ್ಲಿ ತಲಾ 2 ನಿಮಿಷ ಬೇಯಿಸಿ. ಮಧ್ಯದಲ್ಲಿ ಮತ್ತೆ 2 ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ 30 ನಿಮಿಷ ಹಾಗೆಯೇ ಬಿಡಿ.
  11. 30 ನಿಮಿಷಗಳ ನಂತರ ಬಿರಿಯಾನಿಯನ್ನು ನಿಧಾನವಾಗಿ ಕೆಳಗಿನಿಂದ ತೆಗೆದು ಮೊಸರು ಬಜ್ಜಿ ಜೊತೆ ಬಡಿಸಿ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read