ಹೈದರಾಬಾದ್: ಪರೀಕ್ಷಾ ಹಾಲ್‌ನಲ್ಲಿ ನಕಲು ಮಾಡಬೇಡ ಎಂದಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಬುಧವಾರ ಹೈದರಾಬಾದ್ ಬೇಗಂಪೇಟೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ನಂತರ 7ನೇ ತರಗತಿಯ 12 ವರ್ಷದ ಬಾಲಕ ತನ್ನ ಶಾಲಾ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕ ವೇಣುಗೋಪಾಲ್ ಮೇಲೆ ಗಂಟೆ ಬಾರಿಸಲು ಬಳಸುವ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾವು ಹಲ್ಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಬೇಗಂಪೇಟೆ ಇನ್ಸ್‌ಪೆಕ್ಟರ್ ಬಿ. ಪ್ರಸಾದ ರಾವ್ ಹೇಳಿದ್ದಾರೆ.
ಪರೀಕ್ಷೆಯ ಮೊದಲ ದಿನದಂದು ಬಾಲಕ ನಕಲು ಮಾಡುತ್ತಿರುವುದು ಕಂಡುಬಂದಾಗ, ಶಿಕ್ಷಕರು ವಿದ್ಯಾರ್ಥಿಗಳನ್ನು ಬೇರ್ಪಡಿಸಿದ್ದಾರೆ. ಪರೀಕ್ಷೆ ಮುಗಿದ ನಂತರ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಲಕನ ಕುಟುಂಬ ಸದಸ್ಯರು ಕ್ಷಮೆಯಾಚಿಸಿದ್ದಾರೆ. ವಿದ್ಯಾರ್ಥಿಯ ಜೀವನ ಹಾಳುಮಾಡಲು ಇಷ್ಟಪಡದ ಶಿಕ್ಷಕರು ತಮ್ಮ ದೂರನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ಬಾಲಾಪರಾಧಿಯಾಗಿರುವುದರಿಂದ ಬಾಲಕನ ಕುಟುಂಬ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ತನಿಖೆಯ ನಂತರ, ಅವನನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಿ. ಪ್ರಸಾದ ರಾವ್ ತಿಳಿಸಿದ್ದಾರೆ.