ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ, ಹತ್ಯೆ ಬಳಿಕ ಆರೋಪಿ ಎನ್ ಕೌಂಟರ್ ಗೆ ಬಲಿ ಪ್ರಕರಣವನ್ನು ರಾಜ್ಯ ಸರ್ಕಾರ ತನಿಖೆಗೆ ಸಿಐಡಿಗೆ ವರ್ಗಾವಣೆ ಮಾಡಿದೆ.
ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ಆಗಮಿಸಿದೆ. ಸಿಐಡಿ ಎಸ್ ಪಿ ವೆಂಕಟೇಶ್ ನೇತೃತ್ವದ ಮೂವರು ಅಧಿಕಾರಿಗಳ ತಂಡ ಹುಬ್ಬಳ್ಳಿ ಆಗಮಿಸಿದ್ದು, ತನಿಖೆ ಆರಂಭಿಸಿದೆ.
ಪ್ರಕರಣದ ತನಿಖೆಗೆ ತಜ್ಞರ ತಂಡ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಪಿಐಎಲ್ ಸಲ್ಲಿಸಿದೆ. ಪ್ರಕರಣದ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಏಪ್ರಿಲ್ 13ರಂದು ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಕೊಡುವುದಾಗಿ ಆಸೆ ತೋರಿಸಿ ಹೊತ್ತೊಯ್ದ ಬಿಹಾರ ಮೂಲದ ಆರೋಪಿ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಪರಾರಿಯಾಗಿದ್ದ. ಸಿಸಿಕ್ಯಾಮರಾ ಆಧರಿಸಿ ಆರೋಪಿ ರಿತೇಶ್ ನನ್ನು ಪೊಲೀಸರು ಬಂಧಿಸಿದ್ದರು. ಸ್ಥಳಮಹಜರು ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆರೋಪಿ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.