ನವದೆಹಲಿ: ‘ನನ್ನ ಗಂಡನನ್ನು ಹೇಗೆ ಕೊಲ್ಲುವುದು’ಎಂದು ಯೂಟ್ಯೂಬ್ ನಲ್ಲಿ ಹುಡುಕಿದ ರಾಜಸ್ಥಾನದ ಮಹಿಳೆ ನಂತರ ಪತಿ ಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ.
ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ “ಗಂಡನನ್ನು ಹೇಗೆ ಕೊಲ್ಲುವುದು ಹೇಗೆ”ಎಂದು ಹುಡುಕಿದ ನಂತರ ಮಹಿಳೆ ತನ್ನ ಪತಿ ಮಲಗಿದ್ದಾಗ ಅವನ ಮೇಲೆ ಕುದಿಯುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಭವಾನಿ ಮಂಡಿ ಪಟ್ಟಣದ ರಾಮನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದಿನಗೂಲಿ ಕಾರ್ಮಿಕನಾಗಿರುವ 35 ವರ್ಷದ ಮನೀಶ್ ರಾಥೋಡ್ ಅವರ ಮೇಲೆ ತಡರಾತ್ರಿ ಅವರ ಪತ್ನಿ ಸರೋಜ ಹಲ್ಲೆ ನಡೆಸಿದ್ದಾಳೆ. ಸರೋಜ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಕುದಿಸಿ ತನ್ನ ಪತಿಯ ಮೇಲೆ ಸುರಿದು ಹೊರಗಿನಿಂದ ಬಾಗಿಲು ಹಾಕಿದ್ದಾಳೆ. ಇದರಿಂದ ಮನೀಶ್ ಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.
ಅವನ ಕಿರುಚಾಟ ಕೇಳಿದ ನಂತರ ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮನೀಶ್ ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಝಲಾವರ್‌ನಲ್ಲಿರುವ SRG ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ಸುಟ್ಟ ಗಾಯಗಳಾಗಿರುವ ಮನೀಶ್ ಸ್ಥಿತಿ ಗಂಭೀರವಾಗಿದೆ.
ಉತ್ತರ ಪ್ರದೇಶದ ಸರೋಜ, ಮಾಜಿ ಬಾಡಿಗೆದಾರ ರಾಮಸೇವಕ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಂಪತಿ ಕಳೆದ ಕೆಲವು ತಿಂಗಳುಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ಪ್ರತ್ಯೇಕ ಕೋಣೆಗಳಲ್ಲಿ ವಾಸಿಸುತ್ತಿದ್ದರು. ಸರೋಜ ಯೂಟ್ಯೂಬ್‌ನಲ್ಲಿ ಹಿಂಸಾತ್ಮಕ ವಿಷಯ ವೀಕ್ಷಿಸುತ್ತಿದ್ದರು ಮತ್ತು ತನ್ನ ಪತಿಗೆ ಹಾನಿ ಮಾಡುವ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಪ್ರಾಥಮಿಕ ಪುರಾವೆಗಳು ಈ ಕೃತ್ಯವನ್ನು ಪೂರ್ವಯೋಜಿತ ಎಂದು ಸೂಚಿಸುತ್ತವೆ. ಆರೋಪಿಯು ಯೂಟ್ಯೂಬ್ ಸೇರಿದಂತೆ ವಿವಿಧ ತಾಣಗಳಲ್ಲಿ ಗಂಡನಿಗೆ ಹೇಗೆ ಹಾನಿ ಮಾಡುವುದು ಅಥವಾ ಕೊಲ್ಲುವುದು ಎಂಬುದರ ಕುರಿತು ವೀಡಿಯೊಗಳನ್ನು ವೀಕ್ಷಿಸುತ್ತಿದ್ದಳು. ನಾವು ಆಕೆಯ ಹುಡುಕಾಟದ ಇತಿಹಾಸವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಸರೋಜಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಿತೂರಿಯಲ್ಲಿ ಭಾಗಿಯಾಗಿರುವ ಶಂಕೆಯಿರುವ ರಾಮಸೇವಕ್ ಗಾಗಿ ಹುಡುಕಾಟ ಆರಂಭಿಸಲಾಗಿದೆ.