ಬೆಂಗಳೂರು: ದುರಸ್ತಿ ವೇಳೆ ಕಟ್ಟಡದಿಂದ ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಹದೇವಪುರದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹಾವೇರಿ ಮೂಲದ ಕಾರ್ಮಿಕ 35 ವರ್ಷದ ಯೂಸುಫ್ ಮೃತಪಟ್ಟವರು ಎಂದು ಹೇಳಲಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ನಂತರ ಮಾತನಾಡಿದ ಅವರು, ಸಂಜೆ ಟಿನ್ ಫ್ಯಾಕ್ಟರಿಯ ಬಳಿ ಹಳೆ ಕಟ್ಟಡ ರಿನೋವೇಷನ್ ನಡೆದಿತ್ತು. ಅಬ್ದುಲ್ ವಾಜಿದ್ ಎಂಬವರಿಗೆ ಸೇರಿರುವ ಕಟ್ಟಡ ಇದಾಗಿದೆ. ಅದಕ್ಕೆ ಹಾಕಿದ್ದ ಸಾರುವೆ ಮರ ಮುರಿದು ಬಿದ್ದು ದುರಂತ ಸಂಭವಿಸಿದೆ. ಘಟನೆಯಲ್ಲಿ ಯೂಸುಫ್ ಶರೀಫ್ ಎಂಬವರು ಸಾವನ್ನಪ್ಪಿದ್ದಾರೆ. ತನುಜಾ, ಆಕಾಶ್ ಸೇರಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
