ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಇದೇ ಸೆ.13ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಶೋಭಾಯಾತ್ರೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, 3869 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ 30 ವಿಶೇಷ ತುಕಡಿಗಳ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರದುರ್ಗ ನಗರದಲ್ಲಿ ವ್ಯಾಪಕವಾದ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಚಿತ್ರದುರ್ಗ ಜಿಲ್ಲೆ ಹಾಗೂ ಬೆಂಗಳೂರು ನಗರ ಸೇರಿದಂತೆ ಹೊರಜಿಲ್ಲೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 9 ಎಎಸ್‍ಪಿ, 28 ಡಿಎಸ್‍ಪಿ, 78 ಪಿಐ, 175 ಪಿಎಸ್‍ಐ, 401 ಎಎಸ್‍ಐ, 2678 ಹೆಚ್.ಸಿ, ಪಿಸಿ, 500 ಹೋಮ್ ಗಾರ್ಡ್ ಹಾಗೂ 16 ತುಕಡಿಗಳು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 14 ತುಕಡಿಗಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ರ್ಯಾಪಿಡ್ ಅಕ್ಷನ್ ಪೋಸ್ಟ್ ನಿಯೋಜಿಸಲು ಕ್ರಮಕೈಗೊಳ್ಳಾಗಿದೆ.
ಬಂದೋಬಸ್ತ್ ಕರ್ತವ್ಯದ ಪ್ರಯುಕ್ತ ನಗರದಾದ್ಯಂತ ಪ್ರಮುಖ 151 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು 26 ಕಣ್ಗಾವಲು ವೇದಿಕೆ(Watch Tower) ಗಳನ್ನು ನಿರ್ಮಿಸಲಾಗಿದ್ದು, ಮೆರವಣಿಗೆ ಮಾರ್ಗದಲ್ಲಿನ ವೀಡಿಯೋ ಚಿತ್ರೀಕರಣಕ್ಕೆಂದು 67 ವಿಡಿಯೋ ಕ್ಯಾಮೆರಾಗಳೊಂದಿಗೆ ಸಿಬ್ಬಂದಿಯವರನ್ನು ನಿಯೋಜಿಸಲಾಗಿರುತ್ತದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ಎತ್ತರದ ಕಟ್ಟಡಗಳ ಮೇಲೆ 49 ಸ್ಕೈ ಸೆಂಟ್ರಿಗಳನ್ನು ನಿಯೋಜಿಸಲಾಗಿರುತ್ತದೆ. ಅಲ್ಲದೇ 08 ದ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿರುತ್ತದೆ.
ಶೋಭಾಯಾತ್ರೆ ಮಾರ್ಗದಲ್ಲಿ ಅಳವಡಿಸಲಾಗಿರುವ ಸಿ.ಸಿ.ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ದಿನದ 24 ಗಂಟೆಗಳ ಕಾಲ ಒಂದೇ ಕಡೆ ವೀಕ್ಷಿಸುವ ಸಲುವಾಗಿ ಎಸ್.ಜೆ.ಎಂ. ಡೆಂಟಲ್ ಕಾಲೇಜ್‍ನಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗಿರುತ್ತದೆ. ಬಂದೋಬಸ್ತ್‍ನ ಸೆಕ್ಟರ್ ಅಧಿಕಾರಿಗಳ ಸಂವಹನಕ್ಕಾಗಿ ಹೆಚ್ಚುವರಿ ಕಂಟ್ರೋಲ್ ರೂಂ ತೆರೆಯಲಾಗಿರುತ್ತದೆ. ಶೋಭಾಯಾತ್ರೆಗೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧವಾಗಿ 03 ಸೆಕ್ಟರಲ್ ಮ್ಯಾಜಿಸ್ಟ್ರೇಟ್‍ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಶೋಭಾಯಾತ್ರೆಯ ಹಿನ್ನಲೆಯಲ್ಲಿ ಸೆ.13ರಂದು ಚಿತ್ರದುರ್ಗ ನಗರದಲ್ಲಿ ಸಂಚರಿಸಲಿರುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಪಾರ್ಕಿಂಗ್ ವ್ಯವಸ್ಥೆ:
ಶಿವಮೊಗ್ಗ ಮತ್ತು ಹೊಳಲ್ಕೆರೆಯಿಂದ ಬರುವ ವಾಹನಗಳಿಗೆ ಚಂದ್ರವಳ್ಳಿ ಕ್ರಾಸ್ ಮೈದಾನ ಮತ್ತು ಎಸ್.ಜೆ.ಎಂ ಕಾಲೇಜ್ ಮುಂಭಾಗದ ಮೈದಾನ ಮತ್ತು ಧವಳಗಿರಿ ಬಡಾವಣೆಯ ಡಬಲ್ ರೋಡ್‍ನಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿರುತ್ತದೆ. ದಾವಣಗೆರೆ ಕಡೆಯಿಂದ ಬರುವ ವಾಹನಗಳಿಗೆ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿ ವ್ಯವಸ್ಥೆ ಮಾಡಿರುತ್ತದೆ. ಎನ್.ಹೆಚ್-13 ರಸ್ತೆಯಿಂದ ಬರುವ ವಾಹನಗಳಿಗೆ ಪೊಲೀಸ್ ಸಮುದಾಯ ಭವನದ ಮುಂದಿನ ಮೈಧಾನದಲ್ಲಿ ನಿಲುಗಡೆ ವ್ಯವಸ್ಥೆ ಮಾಡಿರುತ್ತದೆ.
ಜಿಲ್ಲಾಸ್ಪತ್ರೆಗೆ ಬರುವಂತಹ ಅಂಬ್ಯೂಲೆನ್ಸ್‍ಗಳು ತುರುವನೂರು ರಸ್ತೆ ಮುಖಾಂತರ ಹಾಗೂ ಚಳ್ಳಕೆರೆ ಕ್ರಾಸ್, ಸರಸ್ವತಿಪುರಂ ಮಾರ್ಗವಾಗಿ ಜೋಗಿಮಟ್ಟಿ ರಸ್ತೆ ಮುಖಾಂತರ ಸಂಚರಿಸಲು ವ್ಯವಸ್ಥೆ ಮಾಡಿರುತ್ತದೆ. ತುರ್ತು ಸಂದರ್ಭಕ್ಕೆಂದು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಮಾರ್ಗದ 06 ಕಡೆಗಳಲ್ಲಿ ಆಗ್ನಿಶಾಮಕ ವಾಹನಗಳನ್ನು ಸಿಬ್ಬಂದಿಯವರೊಂದಿಗೆ ನಿಯೋಜಿಸಲಾಗಿರುತ್ತದೆ. ಶೋಭಾಯಾತ್ರೆಗೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧವಾಗಿ ನಗರದೊಳಗೆ ಪ್ರವೇಶಿಸುವ ವಾಹನಗಳನ್ನು ಚೆಕ್ ಮಾಡುವ ಸಲುವಾಗಿ ನಗರದ ಹೊರವಲಯದ 09 ಕಡೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಮೊಬೈಲ್ ಪೆಟ್ರೋಲಿಂಗ್‍ಗೆ ಸಂಬಂಧಿಸಿದಂತೆ 18 ಸೆಕ್ಟರ್‍ಗಳಾಗಿ ವಿಂಗಡಿಸಿ ಭದ್ರತೆಯನ್ನು ಕೈಗೊಳ್ಳಲಾಗಿರುತ್ತದೆ. ದಿನಾಂಕ: 12.09.2025 ರಂದು ಸಂಜೆ 6.00 ಗಂಟೆಯಿಂದ ದಿನಾಂಕ: 13.09.2025 ರಂದು ಮಧ್ಯರಾತ್ರಿ 12-00 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನದ್ಯಾಂತ ಎಲ್ಲ ಮದ್ಯ ಮಾರಾಟ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಡಿ.ಜೆ. ಬಳಕೆ, ಪೇಪರ್ ಬ್ಲಾಸ್ಟಿಂಗ್, ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ. ಶೋಭಾಯಾತ್ರೆ ಸಮಯದಲ್ಲಿ ಡಿ.ಜೆ.ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಶೋಭಾಯಾತ್ರೆ ಮಾರ್ಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ವ್ಯವಸ್ಥೆ ಕೈಗೊಂಡಿದ್ದು, ಸ್ಥಳದಲ್ಲಿ ಅಗ್ನಿಶಾಮಕದಳದ ವಾಹನವನ್ನು ಸಿಬ್ಬಂದಿಯವರೊಂದಿಗೆ ಕಾಯ್ದಿರಿಸಲು ಕ್ರಮ ಕೈಗೊಂಡಿರುತ್ತದೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾವಹಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ, ಚಿತ್ರಗಳು ಇತರೆ ವಿವರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 509 ರೌಡಿ ಅಸಾಮಿಗಳು, 63 ಮತೀಯ ಗೂಂಡಾ ಅಸಾಮಿಗಳು, ಸಮಾಜಘಾತುಕ ವ್ಯಕ್ತಿಗಳ ಭದ್ರತಾ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದು, ಈ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಶೋಭಾಯಾತ್ರೆಯಲ್ಲಿ ಹೆಚ್ಚಿನ ಜನಸಂದಣಿ ಸೇರುವುದರಿಂದ, ಯಾವುದೇ ಕಾಲ್ತುಳಿತ ಇನ್ನಿತರೆ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಶೋಭಾಯಾತ್ರೆ ಸಾಗುವ ಮಾರ್ಗದ 05 ಸ್ಥಳಗಳಲ್ಲಿ (Emergency Response Team) ಎಸ್.ಡಿ.ಅರ್.ಎಫ್ ತಂಡವನ್ನು ಸನ್ನದ್ಧವಾಗಿಡಲಾಗಿದೆ. 05 ಕಡೆಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು, 06 ಕಡೆಗಳಲ್ಲಿ ಪೊಲೀಸ್ ಸಹಾಯ ವಾಣಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿರುತ್ತದೆ. ವೈದ್ಯರು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ, ರೆಡ್ ಕ್ರಾಸ್, ಗೃಹ ರಕ್ಷಕ, ಅಗ್ನಿಶಾಮಕ ದಳ ಮತ್ತು ನಗರಸಭೆಯ ತರಬೇತಿ ಹೊಂದಿದ ಸಿಬ್ಬಂದಿಯವರನ್ನು ತುರ್ತು ಸ್ವಂದನ ತಂಡಗಳಲ್ಲಿ ನಿಯೋಜಿಸಿದೆ. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿರುವ ಸಾರ್ವಜನಿಕ ವಾಸ ಸ್ಥಳಗಳು (Bylane) ಗಳಲ್ಲಿ ಬಂದೋಬಸ್ತ್‍ಗಾಗಿ ಸಿಬ್ಬಂದಿಯವರನ್ನು ನೇಮಿಸಲಾಗಿರುತ್ತದೆ. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿನ ಶಿಥಿಲ ಕಟ್ಟಡಗಳ ಮೇಲೆ ಜನರು ನಿಂತು ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.
ನಗರದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮೆರವಣಿಗೆ ಸಮಯದಲ್ಲಿ ಗಲಾಟೆಯಲ್ಲಿ ತೊಡಗುವಂತಹ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಅಂತಹ ವ್ಯಕ್ತಿಗಳನ್ನು ಪಿಕಪ್ ಮಾಡಲು 05 ಪಿಕಪ್ ಸ್ವ್ಕಾಡ್‍ಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಕ್ಕೆಂದು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಮಾರ್ಗದ 10 ಕಡೆಗಳಲ್ಲಿ ಅಂಬ್ಯೂಲೆನ್ಸ್‍ಗಳನ್ನು ನಿಯೋಜಿಸಲಾಗಿರುತ್ತದೆ.
ನಗರದ ಜಿಲ್ಲಾಸ್ಪತ್ರೆ ಮತ್ತು ಬಸವೇಶ್ವರ ಅಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ತಂಡಗಳು ಹಾಗೂ 30 ಹಾಸಿಗೆಗಳನ್ನು ಕಾಯ್ದಿರಿಸಲು ಕ್ರಮ ಕೈಗೊಂಡಿರುತ್ತದೆ. ಮೆರವಣಿಗೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿವಿಧ ತಂಡಗಳಲ್ಲಿ ನುರಿತ 15 ವೈದ್ಯರನ್ನು ನಿಯೋಜಿಸಲಾಗಿರುತ್ತದೆ. ಸಾರ್ವಜನಿಕರಲ್ಲಿ ಪೊಲೀಸ್ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಸಂದೇಶಗಳಿಗೆ ಗಮನ ಕೊಡದೇ ಶಾಂತಿಯುತವಾಗಿ ಗಣೇಶ ಉತ್ಸವವನ್ನು ಆಚರಿಸಲು ಕೋರಲಾಗಿದೆ.
ಶಾಂತಿ ಕದಡುವ ಬಗ್ಗೆ ಮಾಹಿತಿ ಇದ್ದರೆ, ಇ.ಅರ್.ಎಸ್.ಎಸ್. ದೂರವಾಣಿ ಸಂಖ್ಯೆ:112, ಜಿಲ್ಲಾ ನಿಸ್ತಂತು ಕೇಂದ್ರ ಮೊ.ನಂ: 9480803100 ಮತ್ತು ದೂರವಾಣಿ ಸಂಖ್ಯೆ: 08194-222782 ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.