ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಪ್ರಮುಖ ಶಿಮ್ಲಾ-ಚಂಡೀಗಢ ರಸ್ತೆ ಸೇರಿದಂತೆ ಹಲವು ರಸ್ತೆಗಳು ಬಂದ್ ಆಗಿದ್ದು, ಬಸ್‌ಗಳು ಮತ್ತು ಟ್ರಕ್‌ಗಳಿಗೆ ಮುಚ್ಚಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆಗಸ್ಟ್ 14 ರವರೆಗೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಹವಾಮಾನ ಕೇಂದ್ರವು ಆಗಸ್ಟ್ 14 ರಿಂದ 17 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚಿನ ಹಳದಿ ಎಚ್ಚರಿಕೆಯನ್ನು ನೀಡಿದೆ.
ಸೋಲನ್‌ನ ಕಂದಘಾಟ್ ಉಪವಿಭಾಗದ ಜಾಡೋನ್ ಗ್ರಾಮದಲ್ಲಿ ಮೋಡದ ಸ್ಫೋಟದಿಂದಾಗಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎರಡು ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಕೊಚ್ಚಿಹೋಗಿವೆ. ಜಾಡೋನ್ ಗ್ರಾಮದಲ್ಲಿ ಮೇಘಸ್ಫೋಟದ ಘಟನೆ ವರದಿಯಾದ ನಂತರ ಐವರನ್ನು ರಕ್ಷಿಸಲಾಗಿದೆ ಎಂದು ಎಸ್‌ಡಿಎಂ ಕಂದಘಾಟ್, ಸಿದ್ಧಾರ್ಥ ಆಚಾರ್ಯ ಮಾಹಿತಿ ನೀಡಿದರು.
ಸೋಲನ್ ಜಿಲ್ಲೆಯ ಜಾಡೋನ್ ಗ್ರಾಮದಲ್ಲಿ ಮೇಘಸ್ಫೋಟದಲ್ಲಿ ಏಳು ಜನರ ಸಾವಿಗೆ ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
621 ರಸ್ತೆಗಳು ಬಂದ್
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಂಡಿಯಲ್ಲಿ ಗರಿಷ್ಠ 236, ಶಿಮ್ಲಾದಲ್ಲಿ 59 ಮತ್ತು ಬಿಲಾಸ್‌ಪುರ ಜಿಲ್ಲೆಯಲ್ಲಿ 40 ಸೇರಿದಂತೆ ಒಟ್ಟು 621 ರಸ್ತೆಗಳನ್ನು ಪ್ರಸ್ತುತ ವಾಹನ ಸಂಚಾರಕ್ಕೆ ಮುಚ್ಚಲಾಗಿದೆ.
ಮಳೆಯಿಂದಾಗಿ ಭಾರೀ ಹಾನಿ
ಮೇಘಸ್ಫೋಟದಿಂದಾಗಿ ಮಂಡಿ ಜಿಲ್ಲೆಯ ಸರ್ಕಾಘಾಟ್ ಪ್ರದೇಶದ ಎರಡು ಗ್ರಾಮಗಳಾದ ಘೋಮು ಮತ್ತು ಜಾವಳಿಯಲ್ಲಿ ಕೃಷಿ ಭೂಮಿ ಮತ್ತು ಮನೆಗಳಿಗೆ ಭಾರಿ ಹಾನಿಯಾಗಿದ್ದು, ನಷ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಂಡಿ ಎಸ್ಪಿ ಸೌಮ್ಯ ಸಾಂಬಶಿವನ್ ಪಿಟಿಐಗೆ ತಿಳಿಸಿದರು.
ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಹಮೀರ್‌ಪುರ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹಾನಿಯನ್ನುಂಟುಮಾಡಿದೆ. ಬಿಯಾಸ್ ನದಿ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ.
https://twitter.com/ANI/status/1690909008490885120