ಬೆಂಗಳೂರಿನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ: ಪ್ಲೇಆಫ್ ಗೆ ಅಧಿಕೃತ ಎಂಟ್ರಿಗೆ RCB ಸಜ್ಜು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಇದರೊಂದಿಗೆ ಐಪಿಎಲ್ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್ 18 ನೇ ಆವೃತ್ತಿ ಪುನಾರಂಭವಾಗಲಿದೆ. ಇತ್ತೀಚೆಗೆ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಪಂದ್ಯದ ಮುಖ್ಯ ಆಕರ್ಷಣೆಯಾಗಿದ್ದಾರೆ.

11 ಪಂದ್ಯಗಳಿಂದ 8 ಜಯ 3 ಸೋಲು ಕಂಡಿರುವ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ 14 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇಷ್ಟೇ ಅಂಕಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ ಉತ್ತಮ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ 18 ಅಂಕಗಳೊಂದಿಗೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ.

12 ಪಂದ್ಯಗಳನ್ನು ಆಡಿರುವ ಅಜಿಂಕ್ಯಾ ರೆಹಾನೆ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಪರ್ಧೆಯನ್ನು ಜೀವಂತವಾಗಿಟ್ಟುಕೊಳ್ಳಲು ಮೂರು ಬಾರಿಯ ಚಾಂಪಿಯನ್ ಕೆಕೆಆರ್ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಸೋತರೆ ಸ್ಪರ್ಧೆಯಿಂದ ನಿರ್ಗಮಿಸುವ ನಾಲ್ಕನೇ ತಂಡವಾಗಲಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಕೆಕೆಆರ್ ಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.

ಕಳೆದ ನಾಲ್ಕು ಪಂದ್ಯಗಳಲ್ಲಿ ಅಜೇಯ ಗೆಲುವು ಕಾಯ್ದುಕೊಂಡಿರುವ ಆರ್ಸಿಬಿ ತವರಿನಲ್ಲಿ ಮೂರನೇ ಹಾಗೂ ಸತತ ಐದನೇ ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಕೇಂದ್ರ ಬಿಂದುವಾಗಿದ್ದಾರೆ. ಹಾಲಿ ಋತುವಿನಲ್ಲಿ 11 ಪಂದ್ಯಗಳನ್ನು ಆಡಿರುವ ಕೊಹ್ಲಿ 505 ರನ್ ಗಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read