ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಪೆರೋಲ್ ನೀಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ನಿರ್ದೇಶನ ನೀಡಲಾಗಿದೆ.
ಪೆರೋಲ್ ಗೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬದಲಾಗಿ ಅರ್ಜಿ ಸಲ್ಲಿಕೆಯಿಂದ ಹಿಡಿದು ಮಂಜೂರಾತಿವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ಮಾಡಬೇಕು. ಈ ನಿಟ್ಟಿನಲ್ಲಿ ನಾಲ್ಕು ವಾರಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಅತ್ಯಾಚಾರ ಪ್ರಕರಣದ ಸಜಾಬಂಧಿಯ ತಾಯಿ ತನ್ನ ಮನೆ ದುರಸ್ತಿಪಡಿಸಲು ನೆರವಾಗುವುದಕ್ಕೆ ಪುತ್ರನಿಗೆ 30 ದಿನ ಪೆರೋಲ್ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಯಾವುದೇ ಅಪರಾಧಿ ಪೆರೋಲ್ ಬೇಕಾದರೆ ಭೌತಿಕವಾಗಿ ಅರ್ಜಿ ಸಲ್ಲಿಸಬೇಕು. ನಂತರ ಫಾಲೋ ಅಪ್ ಗಾಗಿ ಕಚೇರಿಗಳಿಗೆ ಓಡಾಡುವುದು ಇಂದಿನ ಕಾಲಕ್ಕೆ ಸಮಂಜಸವಲ್ಲ ಎಂದು ಹೇಳಲಾಗಿದ್ದು, ಪೆರೋಲ್ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವಂತೆ ಆದೇಶಿಸಿದೆ.