ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಬಿಜೆಪಿ ಎಂಎಲ್ ಸಿ ಎನ್.ರವಿಕುಮಾರ್ ಅವರಿಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನವಿರುದ್ಧ ಪ್ರಕರಣ ರದ್ದು ಕೋರಿ ರವಿಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ರವಿಕುಮಾರ್ ವಿರುದ್ಧ ತನಿಖೆಗೆ ತಡೆ ನೀಡಿದೆ. ರವಿಕುಮಾರ್ ವಿರುದ್ಧ ಶಾಲಿನಿ ರಜನೀಶ್ ದೂರು ನೀಡಿಲ್ಲ. ಮೂರನೇ ವ್ಯಕ್ತಿ ದೂರು ಆಧರಿಸಿ ಕೇಸ್ ಹಾಕಲಾಗಿದೆ. ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲ ಎಂದು ಎಂಎಲ್ ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ರವಿಕುಮಾರ್ ವಿರುದ್ಧ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.