ಬೆಂಗಳೂರು : 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಮತ್ತು ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಅಪ್‌ಡೇಟ್ ಮಾಡುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಸೂತ್ತೋಲೆ ಹೊರಡಿಸಿದೆ.
ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಅಭ್ಯರ್ಥಿ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು) 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-ನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಮತ್ತು ವಿದ್ಯಾರ್ಥಿಗಳ ವಿವರಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ದಿನಾಂಕ: 07-02-2024 ರಿಂದ ಅವಕಾಶ ಕಲ್ಪಿಸಲಾಗಿದೆ.
ಮಂಡಲಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ಪರಿಶೀಲಿಸಿ ಹಾಗೂ ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿಗಳನ್ನು ಅಪ್‌ಡೇಟ್ ಮಾಡಲು ಸೂಚಿಸಿದೆ. ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಇದು ಕೊನೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರ ಹಾಗೂ ಅಂಕಪಟ್ಟಿಗಳಲ್ಲಿ ನಮೂದಾಗುತ್ತವೆ. ಈ ಬಗ್ಗೆ ಏನಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸೂಚನೆ ನೀಡಿದೆ.