ಮೈಸೂರು: ಒಂದೇ ವ್ಯವಸ್ಥೆಯಡಿ ಅಲೋಪಥಿ ಮತ್ತು ಆಯುಷ್ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಡೆದ ಆಯುರ್ವೇದ ವೈದ್ಯರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಂದೇ ವ್ಯವಸ್ಥೆಯಡಿ ಆಯುಷ್ ಮತ್ತು ಅಲೋಪಥಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.
ರೋಗ ಬರದಂತೆ ತಡೆಯುವುದು ಆಯುಷ್ ಚಿಕಿತ್ಸೆ. ಹೀಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ಸೇವೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಇಬ್ಬರು ಅಥವಾ ಮೂವರು ಆಯುಷ್ ವೈದ್ಯರನ್ನು ನೇಮಕ ಮಾಡಿ ಐದು ಬೆಡ್ ಗಳನ್ನು ಒದಗಿಸಿ ಪಂಚಕರ್ಮ, ಮಸಾಜ್ ಸೇರಿ ಆಯುಷ್ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಜನಸಂದಣಿ ಹೆಚ್ಚು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಇಬ್ಬರು ಆಯುಷ್ ವೈದ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು. ಆಯುಷ್ ಮತ್ತು ಆಲೋಪತಿ ವೈದ್ಯರ ನಡುವೆ ಕೆಲವು ಗೊಂದಲಗಳಿದ್ದು, ಆಯುಷ್ ವೈದ್ಯರ ಸೇವೆಯನ್ನು ಅಲೋಪಥಿ ವೈದ್ಯರು ಆಕ್ಷೇಪಿಸುತ್ತಿದ್ದಾರೆ.
ಖಾಸಗಿ ಕ್ಲಿನಿಕ್ ಗಳನ್ನು ನಡೆಸುತ್ತಿರುವ ಆಯುಷ್ ವೈದ್ಯರಿಗೆ KMPA ಮೂಲಕ ತೊಂದರೆ ಆಗುತ್ತಿದ್ದರೆ ಇನ್ನು ಮುಂದೆ ಯಾವುದೇ ತೊಂದರೆಗಳು ಆಗುವುದಿಲ್ಲ. ಆಯುಷ್, ಅಲೋಪಥಿ ವೈದ್ಯರ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಎರಡೂ ಕಡೆಯವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.