ಲಖನೌ: ಯುವಕನೊಬ್ಬ ಇಯರ್ ಫೋನ್ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಇಂತದ್ದೇ ಮತ್ತೊಂದು ದುರಂತ ನಡೆದಿದೆ. ಹೆಡ್ ಫೋನ್ ಹಾಕಿಕೊಂಡು ಇಬ್ಬರು ವಿದ್ಯಾರ್ಥಿಗಳು ರೈಲ್ವೆ ಹಳಿ ಕ್ರಾಸ್ ಮಾಡುತ್ತಿದ್ದಾಗ ಬಂದ ರೈಲು ಇಬ್ಬರ ಮೇಲೂ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿನ ಮಾಮಪಲ್ ರೈಲ್ವೆ ಕ್ರಾಸಿಂಗ್ ಬಳಿ ರೈಲು ಡಿಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮೃತರನ್ನು ಫಜುಲ್ಲಗಂಜ್ ಮಡಿಯಾನ್ ನಿವಾಸಿ 18 ವರ್ಷದ ಅಕ್ಷತ್ ಮೌರ್ಯ ಹಾಗೂ ಸೀತಾಪುರ ಜಿಲ್ಲೆಯ ಹರ್ಗಾಂವ್ ನಿವಾಸಿ ಕರಣ್ ಪಟೇಲ್ ಎಂದು ಗುರುತಿಸಲಾಗಿದೆ. ಇಬ್ಬರೂ 12ನೇ ತರಗತಿ ವಿದ್ಯಾರ್ಥಿಗಳು. ಬಿಕೆಟಿ ಪ್ರದೇಶದ ಎಸ್ ಆರ್ ಗ್ಲೋಬಲ್ ಕಾಲೇಜಿನ ಹಾಸ್ಟೆಲ್ ನಲ್ಲಿದ್ದು ವ್ಯಾಸಂಗ ಮಾಡುತ್ತಿದ್ದರು.