ಹಾವೇರಿ: ಹಾವೇರಿಯ ರಟ್ಟಿಹಳ್ಳಿಯ ಕಡೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕಡೂರು ಗುಡ್ಡದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಒಂದು ತಿಂಗಳಿಂದ ರೈತರ ಜಮೀನಿನಲ್ಲಿ ಚಿರತೆ ಒಡಾಡುತ್ತಿತ್ತು. ಇದರಿಂದ ಕಂಗಾಲಾಗಿದ್ದ ರೈತರು ಕೃಷಿ ಕೆಲಸಕ್ಕೆ ಹೋಗದೇ ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ವಾರ ತೋಟದ ಮನೆಯೊಂದಕ್ಕೆ ಲಗ್ಗೆಯಿಟ್ಟಿದ್ದ ಚಿರತೆಯ ಓಡಾಟ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗೆ ರೈತರು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಸದ್ಯ ರೈತರು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
