ಹಾಸನ ಹೇಮಾವತಿ ಜಲಾಶಯದ ಬಳಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ 700 ಎಕರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪರಿಶೀಲನೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್ ಸರ್ಕಾರ ಮಾತ್ರ ಕೊಟ್ಟ ಮಾತಿನಂತೆ ನಡೆದಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಹಾಸನದಲ್ಲಿ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಸುಮಾರು 298 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಗಿದೆ. ಹಾಸನ ಜಿಲ್ಲೆಯ ರಾಜಕೀಯ ಚಿತ್ರಣ ಮತ್ತು ಇಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಸ್ಪಷ್ಟವಾದ ಅರಿವಿದೆ. ಈ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ 492 ಭರವಸೆಗಳನ್ನು ನೀಡಿದ್ದು, ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ. 2013 ರಿಂದ 2018 ರವರೆಗೆ ಹಾಗೂ 2023 ರಿಂದ ಇಲ್ಲಿಯವರೆಗಿನ ನಮ್ಮ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. 2013-2018ರಲ್ಲಿ ನೀಡಲಾಗಿದ್ದ 162 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಆರಂಭಿಸಿದೆವು. ಈ ಪ್ರಯತ್ನದ ಫಲವಾಗಿ ಜೂನ್ ತಿಂಗಳಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದುವರೆಗೂ ಸುಮಾರು ₹600 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಉಚಿತ ಬಸ್ ಸೇವೆ ಪಡೆದಿದ್ದಾರೆ ಎಂದರು.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಬಳಿ 700 ಎಕರೆ ಜಾಗವಿದ್ದು, ಅಲ್ಲಿ ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರವರು ಕೋರಿಕೆ ಸಲ್ಲಿಸಿದ್ದಾರೆ, ಈ ಬಗ್ಗೆ ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಜಾರಿಯಾಗಿಸಲು ಸಾಧ್ಯವಿಲ್ಲ ಎಂದು ವಿಪಕ್ಷಗಳು ದೂರಿದವು. ಆದರೆ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ್ದು, ಇದುವರೆಗೆ 1,08,135 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂದು ವಿಪಕ್ಷದವರು ಅರೋಪಿಸಿದರು. ಗ್ಯಾರಂಟಿ ಯೋಜನೆಗಳು ಈಗಲೂ ಜನರ ಬದುಕು ಹಸನಾಗಿಸುತ್ತಿವೆ. ಟೀಕೆಗಳು ಸಾಯುತ್ತವೆ ಆದರೆ, ನಮ್ಮ ಜನಪರ ಕಾರ್ಯಗಳು ಸದಾ ಉಳಿಯುತ್ತವೆ ಎಂದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿದೆ. ಇದನ್ನು ವ್ಯರ್ಥ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ, ಅವರಿಗೆ ಜನರೇ ಉತ್ತರ ಕೊಡಬೇಕು. ಹಾಸನ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದನ್ನು ನಾವು ಜಾರಿ ಮಾಡಿದ್ದೇವೆ. ಇಂದು ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಂಡ ಯೋಜನೆಗಳು ಜನೋಪಕಾರಿಯಾಗಿವೆ. ಇನ್ನು ಮುಂದೆಯೂ ಹಾಸನ ಜಿಲ್ಲೆಗೆ ವಿಶೇಷ ಗಮನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read