ರಾಜ್ಯ ಸರ್ಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಗಿದೆ; I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ರಾಜ್ಯದ ಹಿತ ಬಲಿಕೊಟ್ಟ ಕಾಂಗ್ರೆಸ್; ಖರ್ಗೆ ಮೌನವೂ ಅಚ್ಚರಿ ತಂದಿದೆ ಎಂದು HDK ಆಕ್ರೋಶ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್. ಡಿ.ಕುಮರಸ್ವಾಮಿ ವಾಕ್ಪ್ರಹಾರ ನಡೆಸಿದ್ದಾರೆ. ಡಿಎಂಕೆ ಅಂಗಪಕ್ಷವಾಗಿರುವ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದ ಹಿತವನ್ನು ಬಲಿಗೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ರಾಜ್ಯ ಸರಕಾರ. ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರಕಾರಕ್ಕೆ ಇರಲೇ ಇಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ. ತಮಿಳುನಾಡಿನ ಜತೆ ಆ ಪಕ್ಷದ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡ ಕಾರಣಕ್ಕೆ ಕಾವೇರಿ ಹಿತವನ್ನು ವ್ಯವಸ್ಥಿತವಾಗಿ ಬಲಿ ಕೊಡಲಾಗಿದೆ. ಆ.10ರಂದು ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆ ನಡೆಯಿತು. ಮರುದಿನ ಕಾವೇರಿ ಜಲನಿರ್ವಹಣಾ ಪ್ರಾಧಿಕಾರ ಸಭೆ ಆಯಿತು. ಮುಂದಿನ 15 ದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತು. ತಕ್ಷಣವೇ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಹಾಗೆ ಮಾಡಲೇ ಇಲ್ಲ. ಸುಪ್ರೀಂಕೋರ್ಟ್ ಕಡೆ ಮುಖ ಮಾಡದೆ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಪ್ರಾಧಿಕಾರದ ಆದೇಶವನ್ನೇ ನೆಪ ಮಾಡಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿತು. ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಎಳೆದುಬಿಟ್ಟಿತು ಎಂದು ಗುಡುಗಿದ್ದಾರೆ.

ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು. ಮಾನ್ಯ ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ, ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿದ್ದರು! ಅವರ ಮೌನ ನನಗೆ ಅಚ್ಚರಿ ಉಂಟು ಮಾಡಿದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೌದು. ಆದರೆ, ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು? ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read