ಆನೇಕಲ್: ಸಹೋದರಿಗೆ ಜಿಮ್ ಟ್ರೇನರ್ ಮೆಸೇಜ್ ಮಾಡಿದ್ದಕ್ಕೆ ಜಿಮ್ ಗೆ ನುಗ್ಗಿದ ಅಣ್ಣಂದಿರು ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹೆಬ್ಬಗೋಡಿಯ ಅನಂತನಗರದ ರಿಪ್ಡ್ ಜಿಮ್ ನಲ್ಲಿ ಈ ಘಟನೆ ನಡೆದಿದೆ. ಆನೇಕಲ್ ನಿವಾಸಿ ಜಿಮ್ ಟ್ರೇನರ್ ಸಂದೀಪ್ ಹಲ್ಲೆಗೊಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅರುಣ್, ಗೌತಮ್ ಹಾಗೂ ಸ್ನೇಹಿತರು ಸೇರಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಅರುಣ್ ಹಾಗೂ ಗೌತಮ್ ಸಹೋದರಿ ಅನುಷಾ ಜಿಮ್ ಗೆ ಹೋಗುತ್ತಿದ್ದರು. ಈ ವೇಳೆ ಜಿಮ್ ಟ್ರೇನರ್ ಹಾಗೂ ಅನುಷಾ ಇಬ್ಬರೂ ಸ್ನೇಹಿತರಾಗಿದ್ದಾರೆ. ಇಬ್ಬರೂ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡುತ್ತಿದ್ದರು. ಅನುಷಾ ಮೊಬೈಲ್ ನೋಡಿದ್ದ ಅಣ್ಣಂದಿರು ಸಂದೀಪ್ ಮೆಸೇಜ್ ಮಾಡುತ್ತಿರುವುದು ಹಾಗೂ ತಮ್ಮ ತಂಗಿ ಅದಕ್ಕೆ ಪ್ರತಿಸಂದೇಶ ಕಳುಹಿಸುವುದು ಗೊತ್ತಾಗಿದೆ.
ಇದರಿಂದ ಕೋಪಗೊಂಡ ಅಣ್ಣಂದಿರು ಅನುಷಾ ಮೊಬೈಲ್ ಹ್ಯಾಕ್ ಆಗಿದೆ ಎಂದು ಆರೋಪಿಸಿ ಜಿಮ್ ಗೆ ನುಗ್ಗಿ ಏಕಾಏಕಿ ಸಂದೀಪ್ ಗೆ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಂದೀಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ.