ಬೆಂಗಳೂರು: ಶೇಕಡ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಬಿಬಿಎಂಪಿಯ ಶಾಲಾ, ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ ನಿಯೋಜನೆ ಮಾಡಿಕೊಂಡಿದ್ದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಪೈಕಿ 72 ಮಂದಿಯ ನಿಯೋಜನೆ ರದ್ದು ಮಾಡಲಾಗಿದೆ.
ಇವರಲ್ಲಿ 35 ಅತಿಥಿ ಶಿಕ್ಷಕರು, ಉಪನ್ಯಾಸಕರು ನಿಗದಿತ ವಿದ್ಯಾರ್ಹತೆ ಹೊಂದಿಲ್ಲ. ಉಳಿದ 37 ಮಂದಿ ಕಳೆದ ಮೂರು ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 50 ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಾರೆ. ಹೀಗಾಗಿ ಗೌರವಧನ ಮಂಜೂರಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅ
ತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಮಾತ್ರ ಶಿಕ್ಷೆ ನೀಡುತ್ತಿಲ್ಲ. ಬಿಬಿಎಂಪಿ ಶಾಲಾ ಕಾಲೇಜಿನ ಕಾಯಂ ಶಿಕ್ಷಕರು ಉಪನ್ಯಾಸಕರಿಗೂ ಬಡ್ತಿ ತಡೆ, ವರ್ಗಾವಣೆ ಶಿಕ್ಷೆ ವಿಧಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯ ಆಯುಕ್ತರಿಗೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.
ಕಳೆದ ಸಾಲಿನಲ್ಲಿ ಬಿಬಿಎಂಪಿಯ ಶಾಲಾ, ಕಾಲೇಜುಗಳಿಗೆ ಶಿಕ್ಷಣ ಇಲಾಖೆ ಮಾದರಿಯಲ್ಲಿ ಎಸ್‌ಡಿಎಂಸಿ ಮತ್ತು ಸಿಡಿಸಿ ಮೂಲಕ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಈ ಬಾರಿಯೂ 804 ಮಂದಿ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿಯೋಜನೆಗೊಂಡ 804 ಮಂದಿಯಲ್ಲಿ 35 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿ ಹೊಂದಿಲ್ಲದಿರುವುದು ದಾಖಲಾತಿಯ ಪರಿಶೀಲನೆಯ ವೇಳೆ ಕಂಡು ಬಂದಿದೆ.