ಲಕ್ಷ್ಮಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ಧತೆ; ಬೆಲೆ ಏರಿಕೆ ಮಧ್ಯೆಯೂ ಮಾರುಕಟ್ಟೆಯಲ್ಲಿ ಖರೀದಿ ಜೋರು…!

ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ, ಶ್ರಾವಣಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯಾದ್ಯಂತ ಸಿದ್ಧತೆ ಜೋರಾಗಿದ್ದು, ಸಾರ್ವಜನಿಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಹೆಂಗಳೆಯರ ಪ್ರಮುಖ ಹಬ್ಬ ಎನಿಸಿರುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಬುಧವಾರವೇ ಸಿದ್ಧತೆ ನಡೆಸಿರುವ ಮಹಿಳೆಯರು ನಗರದ ಮಾರುಕಟ್ಟೆಗೆ ಭೇಟಿ ನೀಡಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಹೂವು ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದರು. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ವರಮಹಾಲಕ್ಷ್ಮೀ ಹಬ್ಬವಾದ್ದರಿಂದ ಹೂವಿಗೆ ಹೆಚ್ಚು ಬೇಡಿಕೆ ಇದ್ದು, ಬೆಲೆ ಬೇರೆ ದಿನಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. ಲಕ್ಷ್ಮೀಪೂಜೆಗೆ ಬಳಸುವ ಹೂವಿನ ಬೆಲೆ ದುಪ್ಪಟ್ಟಾಗಿದ್ದು, ಹಣ್ಣು ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಜವಳಿ ಮಳಿಗೆಗಳಲ್ಲಿ ಹಬ್ಬದ ದಿನದಂದು ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ನೀಡುವ ರವಿಕೆ ಬಟ್ಟೆ ಕೊಳ್ಳುವುದರಲ್ಲಿ ಮಹಿಳೆಯರು ನಿರತರಾಗಿದ್ದರು.

ಲಕ್ಷ್ಮೀ ಮುಖವಾಡ, ಬಳೆ ಖರೀದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ, ಬಳೆ ಖರೀದಿ ಭರಾಟೆ ಜೋರಾಗಿತ್ತು. ತಮ್ಮ ಶಕ್ತ್ಯಾನುಸಾರ ಚಿನ್ನ, ಬೆಳ್ಳಿ, ಮೆಟಲ್ ಲಕ್ಷ್ಮೀ ಮುಖವಾಡ ಖರೀದಿಸಿದರು. ಮುತ್ತೈದೆಯರಿಗೆ ನೀಡಲು ಬಳೆಗಳ ಖರೀದಿಯೂ ಜೋರಾಗಿತ್ತು. ಇದರಿಂದಾಗಿ ಬಳೆ ಅಂಗಡಿಗಳು ಮಹಿಳೆಯರಿಂದಲೇ ತುಂಬಿದ್ದವು.

ಬೆಲೆ ಏರಿಕೆ ಬಿಸಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಹೆಚ್ಚಾಗಿ ಬಳಕೆಯಾಗುವ ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಅದರಂತೆ ಸೇವಂತಿಗೆ ಮಾರೊಂದಕ್ಕೆ 100-120ರೂಗೆ ಏರಿಕೆಯಾಗಿದೆ. ಕನಕಾಂಬರ 100ರೂ. ದುಬಾರಿಯಾಗಿದೆ. ಮಲ್ಲಿಗೆ ಕೆಜಿಗೆ 120-150 ರೂ, ಗುಲಾಬಿ ಕೆಜಿ 400, ಕಾಕಡ, ತಾವರೆ ಹೂವಿನ ಬೆಲೆಯೂ ಏರಿಕೆಯಾಗಿದೆ. ಲಕ್ಷ್ಮೀ ಹಬ್ಬಕ್ಕೆ ಹೆಚ್ಚು ಬಳಸುವ ತಾವರೆ ಹೂವು 20ರಿಂದ 40ರೂ ಆಗಿದೆ.
ವೀಳ್ಯದೆಲೆ ಹಾಗೂ ನಿಂಬೆ ಹಣ್ಣಿನ ಬೆಲೆಯೂ ಹೆಚ್ಚಾಗಿದೆ. ನಿಂಬೆ ಹಣ್ಣು ನಿಂಬೆ ಗಾತ್ರಕ್ಕೆ ತಕ್ಕಂತೆ ಬೆಲೆ ಏರಿಕೆ ಕಂಡಿದೆ.
ವೀಳ್ಯದ ಎಲೆ ಗುಣಮಟ್ಟಕ್ಕೆ ತಕ್ಕಂತೆ ಒಂದು ಕಟ್ಟಿಗೆ 80 ರೂ. ನಿಂದ 180 ರೂ. ವರೆಗೂ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆಯೂ ಏರಿಕೆ: ಹಣ್ಣುಗಳ ಬೆಲೆಯಲ್ಲೂ 10ರಿಂದ 20 ರೂ ಹೆಚ್ಚಳವಾಗಿದೆ. ದಾಳಿಂಬೆ, ಸೇಬು, ಬಾಳೆಹಣ್ಣು, ಮೋಸಂಬಿ ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ಪೂಜೆಯಂದು ದೇವಿಯ ಮುಂದೆ ಒಂಬತ್ತು ತಟ್ಟೆಯಲ್ಲಿ ಹಣ್ಣುಗಳನ್ನು ಇಡಬೇಕಿರುವುದರಿಂದ ಜನರು ಹಣ್ಣುಗಳ ಖರೀದಿಗೆ ಮುಗಿಬಿದ್ದರು. ಬಾಳೆಹಣ್ಣು 90-100, ಸೇಬು ಕೆಜಿಗೆ  220 ರೂ, ಮೋಸಂಬಿ 80 ರೂ,   ದಾಳಿಂಬೆ 200 ರೂ, ಮರಸೇಬು 180 ರೂ, ಸೀತಾಫಲ 80 ರೂ, ಅನಾನಸ್ 50 ರೂ., ಪೇರಲೆ 80 ರೂ. ಮಾರಾಟವಾಗುತ್ತಿದೆ. ತರಕಾರಿ ಬೆಲೆಯೂ ಕೊಂಚ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಜನಜಂಗುಳಿ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಆಗಮಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಹಬ್ಬಕ್ಕಾಗಿ ಅಗತ್ಯ ವಸ್ತುಗಳಾದ ಪೂಜಾ ಸಾಮಗ್ರಿ, ಹೂ, ಹಣ್ಣು ಸೇರಿದಂತೆ ತರಕಾರಿ ಖರೀದಿಸಲು ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದರು.

ಹೆಚ್ಚಾಗಿ ಜನರು ಮಾರುಕಟ್ಟೆಗೆ ಭೇಟಿ ನೀಡಿದ್ದರಿಂದ ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಜನ ಕಿಕ್ಕಿರಿದು ತುಂಬಿದ್ದರು. ಮಾರುಕಟ್ಟೆ ಒಳಗೆ ಕಾಲಿಡಲು ಪರದಾಡುವ ಪರಿಸ್ಥಿತಿ ಇತ್ತು. ಹೂವು, ಹಣ್ಣಿನ ಸ್ಟಾಲ್ ಇರುವ ಕಡೆಗೆ ಒಂದೊಂದು ಹೆಜ್ಜೆ ಇಡಲು ಹರಸಾಹಸ ಪಡಬೇಕಾಯಿತು. ಸಂಚಾರ ದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read