ಬೆಂಗಳೂರು : ರಾಜ್ಯದ ಅರಣ್ಯದೊಳಗೆ ಜಾನುವಾರು ಮೇಯಿಸುವುದನ್ನು ನಿಷೇಧಿಸಲು ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಸರ್ಕಾರ ಶೀಘ್ರವೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಹೌದು, ವನ್ಯಜೀವಿ ಮಾನವರ ಸಂಘರ್ಷ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಿರ್ಬಂಧ ಹೇರಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದ 5 ಹುಲಿಗಳು ಸಾವನ್ನಪ್ಪಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡಲಾಗುತ್ತಿದೆ. ಅದರಿಂದಾಗಿ ಆರಣ್ಯದಲ್ಲಿನ ಸಣ್ಣಪುಟ್ಟ ಸಸಿಗಳು ಹಾಳಾಗುತ್ತಿದ್ದು, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ. ಹಾಗೂ ವನ್ಯ ಜೀವಿಗಳಿಗೂ ಮೇವಿನ ಕೊರತೆ ಎದುರಾಗುವಂತಾಗುತ್ತಿದೆ. ಅದರ ಜತೆಗೆ ಜಾನುವಾರುಗಳು ಕಾಡಿಗೆ ಮೇಯಲು ಹೋದಾಗ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತದೆ ಎಂಬ ದೂರುಗಳಿವೆ ಎಂದಿದ್ದಾರೆ. ಆದ್ದರಿಂದ ಕೂಡಲೇ ಅರಣ್ಯ ಪ್ರದೇಶಗಳಲ್ಲಿ ಮೇಕೆ, ಕುರಿ, ದನ-ಕರುಗಳು ಸೇರಿದಂತೆ ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದು, ಆ ಬಗ್ಗೆ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಬೇಕು ಎಂದು ಆದೇಶಿಸಿದ್ದಾರೆ.