ದಾವಣಗೆರೆ: 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗ್ರಾಮ ಪಂಚಾಯತ್ ಎದುರು ನ್ಯಾಯಕ್ಕಾಗಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ನಡೆದಿದೆ.
ವಿದ್ಯಾರ್ಥಿನಿ ಪಿ.ಬಿ.ಸುಷ್ಮಿತಾ ಆಲೂರು ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇವರಾಜ್ ಅರಸು ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಸುಷ್ಮಿತಾ, ರಸ್ತೆ ಸರಿಪಡಿಸುವಂತೆ ಹಾಗೂ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಆಗ್ರಹಿಸಿ ಧರಣಿ ನಡೆಸುತ್ತಿದ್ದಾಳೆ.
ಶಾಲೆಗೆ ಹೋಗುವ ರಸ್ತೆ ಗುಂಡಿಮಯವಾಗಿದೆ. ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯಲ್ಲಿ ಮಳೆಬಂದಾಗ ಶಾಲೆಗೆ ಹೋಗುವುದೇ ಸಾಧ್ಯವಿಲ್ಲದಂತಾಗಿದೆ. ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು ರಸ್ತೆ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ರಸ್ತೆ ಸರಿಪಡಿಸುವಂತೆ ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.
ಇನ್ನು ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕವಿಲ್ಲ. ಇದರಿಂದಾಗಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿ ಬೇಡಿಕೆ ಇಟ್ಟಿದ್ದಾಳೆ. ಪ್ಲಾಸ್ಟಿಕ್ ಕುರ್ಚಿಗೆ ತನ್ನ ಬೇಡಿಕೆಗಳ ಪಟ್ಟಿಯ ಫಲಕ ಕಟ್ಟಿ ಗ್ರಾಮ ಪಂಚಾಯಿತಿ ಎದುರು ವಿದ್ಯಾರ್ಥಿನಿ ಒಬ್ಬಳೇ ಪ್ರತಿಭಟನೆಗೆ ಕುಳಿತಿದ್ದಾಳೆ.