ಉಡುಪಿ: ಪೋಡಿ ಮಾಡದ ಬಗರ್ ಹುಕುಂ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಚಿಂತನೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಪೋಡಿಯಾಗದ ಬಗರ್ ಹುಕುಂ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಚಿಂತನೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ನಿರ್ದೇಶನದಂತೆ ನೀಡಿದ್ದು, ಅದರಂತೆ ಪೋಡಿ ಆಂದೋಲನ ಮೂಲಕ ಸರ್ವೇ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಆದರೆ, ಕೆಲವರು ಸರ್ವೆ ಮಾಡಿಸಿಕೊಳ್ಳುತ್ತಿಲ್ಲ ಮತ್ತು ಸರ್ವೆ ಇಲಾಖೆಗೆ ಸಹಕಾರ ಕೂಡ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರವೇ ಉಚಿತವಾಗಿ ಸರ್ವೇ ಕಾರ್ಯ ಮಾಡುತ್ತಿದ್ದು, ಬಗರ್ ಹುಕುಂ ಸಾಗುವಳಿದಾರರು ಸರ್ವೇ ಮಾಡಿಸಿಕೊಳ್ಳದಿದ್ದರೆ ಮುಂದೆ ಪ್ರತ್ಯೇಕವಾಗಿ ಅರ್ಜಿ ಹಾಕಿ ತಾವೇ ಸರ್ವೇ ಮಾಡಿಸಿಕೊಳ್ಳಲು ಕಷ್ಟವಾಗುತ್ತದೆ. ಪೋಡಿ ಮಾಡಿದಲ್ಲಿ ಸರ್ಕಾರದ ಭಾಗವಾಗಿದ್ದ ಈ ಜಮೀನಿಗೆ ಖಾಸಗಿಯಾಗಿ ಅವರದ್ದೇ ಹೊಸ ಸರ್ವೆ ನಂಬರ್ ನೀಡಲಾಗುವುದು. ಇದರಿಂದ ಬಗರ್ ಹುಕುಂ ಸಾಗುವಳಿದಾರರು ಎಲ್ಲಾ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಮಂಜೂರಾದ ಜಮೀನು ಬಳಕೆ ಮಾಡದಿದ್ದಲ್ಲಿ, ಪೋಡಿಗೆ ಸಹಕಾರ ನೀಡದಿದ್ದಲ್ಲಿ ಅಂತಹ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗುತ್ತದೆ. ಹೀಗಾಗಿ ಸಾಗುವಳಿದಾರರು ಸರ್ವೇ ಇಲಾಖೆಯೊಂದಿಗೆ ಕೈಜೋಡಿಸಿ ಸರ್ವೆ ಆಂದೋಲನದ ವೇಳೆ ಸರ್ವೆ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.