ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್ ಗಳಿಗೆ ಇನ್ಕ್ಯೂಬೇಷನ್ ಸೌಲಭ್ಯಗಳು ಹಾಗೂ ಕೈಗಾರಿಕಾ – ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಕ್ವಾಂಟಮ್ ಸಿಟಿ ಸ್ಥಾಪನೆಗೆ ಸರ್ಕಾರ ಹೆಸರಘಟ್ಟದಲ್ಲಿ 6.17 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ತಿಳಿಸಿದ್ದಾರೆ.
ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಕ್ವಾಂಟಮ್ ಸಿಟಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಮೊದಲ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಕ್ವಾಂಟಮ್ ಸಿಟಿಗೆ ಜಾಗವನ್ನು ಮಂಜೂರು ಮಾಡಲಾಗಿದೆ. ಹೆಸರಘಟ್ಟದಲ್ಲಿ ನಿರ್ಮಾಣವಾಗಲಿರುವ ಕ್ವಾಂಟಮ್ ಸಿಟಿ ಜಾಗತಿಕ ಪ್ರತಿಭೆ ಹೂಡಿಕೆಗಳನ್ನು ಆಕರ್ಷಿಸಲಿದೆ. ಬೆಂಗಳೂರನ್ನು ಭಾರತದ ಮತ್ತು ವಿಶ್ವದ ಕ್ವಾಂಟಮ್ ಭೂಪಟದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ.