ಬೆಂಗಳೂರು: ಸರ್ವರಿಗೂ ಸೂರು ಯೋಜನೆಯಡಿ ಬಡ ಕುಟುಂಬಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ 42,345 ಮನೆಗಳನ್ನು ಏಪ್ರಿಲ್ 27ರಂದು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು ಮಾತನಾಡಿ, ಏಪ್ರಿಲ್ 27ರಂದು ಹುಬ್ಬಳ್ಳಿಯಲ್ಲಿ ಮನೆಗಳ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಹಾಗೂ ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ 36,789 ಮನೆಗಳ ಹಂಚಿಕೆ ಮಾಡಲಾಗಿತ್ತು. 42,345 ಮನೆಗಳನ್ನು 2ನೇ ಹಂತದಲ್ಲಿ ಹಂಚಿಕೆ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಂಚಿಕೆ ಮಾಡಲಿರುವ ಮನೆಗಳನ್ನು ಮೂಲಸೌಕರ್ಯ ಸಹಿತ ಒಂದು ವಾರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
2013 ರಿಂದ 2023ರ ವರೆಗೆ 1.82 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಫಲಾನುಭವಿಗಳ ವಂತಿಗೆ ಪಾವತಿ ಕಷ್ಟವಾಗಿದ್ದ ಕಾರಣ ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿತ್ತು. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಫಲಾನುಭವಿಗಳ ವಂತಿಗೆ ತಲಾ 4 ಲಕ್ಷ ರೂಪಾಯಿಯನ್ನು ಸರ್ಕಾರವೇ ಭರಿಸಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.