ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ 19 ಜಿಲ್ಲಾ ಆಸ್ಪತ್ರೆ ಹಾಗೂ 147 ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ತೀವ್ರ ನಿಗಾ ಘಟಕಕ್ಕೆ ತಜ್ಞ ವೈದ್ಯರ ಹುದ್ದೆ ಸೃಜಿಸುವ ಕುರಿತ ಸರ್ಕಾರದ ಆದೇಶ ಹೊರಡಿಸಿದೆ.
ರಾಜ್ಯದ 19 ಜಿಲ್ಲಾ ಆಸ್ಪತ್ರೆ ಮತ್ತು 147 ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ತೀವ್ರ ನಿಗಾ ಘಟಕಗಳಿಗೆ ತಜ್ಞ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
19 ಜಿಲ್ಲಾ ಆಸ್ಪತ್ರೆಗೆ ಇಬ್ಬರಂತೆ 38 ತಜ್ಞ ವೈದ್ಯರು(ಫಿಜಿಷಿಯನ್/ಅರವಳಿಕೆ ತಜ್ಞರು) ಹಾಗೂ 147 ತಾಲೂಕು ಆಸ್ಪತ್ರೆಗಳಿಗೆ ಒಬ್ಬರಂತೆ 147 ತಜ್ಞ ವೈದ್ಯರು ಸೇರಿ 185 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎಸ್. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಪ್ರತಿ ಜಿಲ್ಲಾ ಆಸ್ಪತ್ರೆಗೆ 40 ಹಾಸಿಗೆಗಳ ತೀವ್ರ ನಿಗಾ ಘಟಕ ಮತ್ತು ಅದರ ನಿರ್ವಹಣೆಗೆ ಇಬ್ಬರು ತಜ್ಞವೈದ್ಯರು, ಆರು ಮಂದಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಆರು ಮಂದಿರ ಶುಶ್ರೂಷಕರು, ಮೂವರು ಡಿ ಗ್ರೂಪ್ ನೌಕರರು ಸೇರಿ 17 ಮಂದಿ ಅಗತ್ಯವಿದೆ. ಪ್ರತಿ ತಾಲೂಕು ಆಸ್ಪತ್ರೆಗೆ 20 ಹಾಸಿಗೆಗಳ ತೀವ್ರ ನಿಗಾ ಘಟಕ ಮತ್ತು ತಜ್ಞ ವೈದ್ಯರು, ನಾಳ್ವರು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ನಾಲ್ವರು ಶುಶ್ರೂಷಕರು ಹಾಗೂ ಮೂವರು ಡಿ ಗ್ರೂಪ್ ನೌಕರರು ಸೇರಿ 12 ಮಂದಿಯ ಅಗತ್ಯವಿದೆ. ಈ ಕುರಿತಾಗಿ ಆರೋಗ್ಯ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಆರೋಗ್ಯ ಇಲಾಖೆ ತಜ್ಞ ವೈದ್ಯರ ನೇಮಕಾತಿಗೆ ಆದೇಶ ಹೊರಡಿಸಿದೆ.
