GOOD NEWS: 1 ತಿಂಗಳೊಳಗೆ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಸೇರಿ ಆರೋಗ್ಯ ಇಲಾಖೆ ಖಾಲಿ ಹುದ್ದೆ ಭರ್ತಿ

ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದ್ದಾರೆ.

ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರು, 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ.  ಸರ್ಕಾರಿ ಕೋಟಾದಡಿ ವ್ಯಾಸಂಗ ಪೂರೈಸಿದ ವೈದ್ಯರು, ತಜ್ಞ ವೈದ್ಯರು 01 ವರ್ಷ ಕಡ್ಡಾಯ ಸರ್ಕಾರಿ ಸೇವೆ ಕೈಗೊಳ್ಳುವ ಕಾರ್ಯಕ್ರಮದಡಿ 1,500 ವೈದ್ಯರನ್ನು ನೇಮಕ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 120 ತಜ್ಞ ವೈದ್ಯರು ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಹಮತಿಸಿದ್ದು, ಈ ಪ್ರಕ್ರಿಯೆಯೂ ಕೂಡ ಪ್ರಗತಿಯಲ್ಲಿದೆ. ತಜ್ಞ ವೈದ್ಯರ ನೇಮಕಾತಿ ಕುರಿತಂತೆ ಹೈಕೋರ್ಟ್‍ನಲ್ಲಿದ್ದ ಪ್ರಕರಣ ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ 600 ಶುಶ್ರೂಷಾಧಿಕಾರಿಗಳು, 400 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಹಾಗೂ 400 ಫಾರ್ಮಾಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇಲಾಖೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಕೌನ್ಸಿಲಿಂಗ್ ಮೂಲಕ ನೇಮಕ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿವಿಧ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿದ್ದ ಇಲಾಖೆಯ ವೈದ್ಯರು, ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿಗಳ ನಿಯೋಜನೆಯನ್ನು ರದ್ದುಗೊಳಿಸಿ, ಇಲಾಖೆಗೆ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಇಲಾಖೆಗೆ ಅಗತ್ಯ ಇರುವ ಕಡೆಗಳಲ್ಲಿ ಇವರನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read